
ಇಶಾಂತ್ ಗೆ ಗಾಯದ ಸಮಸ್ಯೆ, ಟೀಮ್ ಇಂಡಿಯಾಗೆ ಶಾಕ್!
ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಪಾದದ ಗಾಯದ ಸಮಸ್ಯೆಗೆ ತುತ್ತಾಗಿರುವ ಕಾರಣ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಹ್ಯಾಗ್ಲೀ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಟೆಸ್ಟ್ ಪದ್ಯದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದ, ಇಶಾಂತ್ ಈಗ ಗಾಯಕ್ಕೆ ತುತ್ತಾಗಿರುವುದು ಟೀಮ್ ಇಂಡಿಯಾಗೆ ಭಾರಿ ಆಘಾತ ಉಂಟಾಗಿದೆ.ಇಶಾಂತ್ ಗಾಯಗೊಂಡು ಹೊರಗುಳಿಯುವುದೇ ಆದರೆ ಭಾರತ ತಂಡಕ್ಕೆ ಬಹುದೊಡ್ಡ ಪೆಟ್ಟಾಗಲಿದೆ. ಅವರ ಸ್ಥಾನದಲ್ಲಿ ಯುವ ವೇಗಿ ನವದೀಪ್ ಸೈನಿಗೆ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.ಇನ್ನು ತಂಡದಲ್ಲಿ ಇರುವ ಸ್ಪೀಡ್ ಸ್ಟಾರ್ ಉಮೇಶ್ ಯಾದವ್ ಕೊಡ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪಾದದ ಗಾಯದ ಸಮಸ್ಯೆ ಕಾರಣ ಇಶಾಂತ್ ಶುಕ್ರವಾರ ಭಾರತ ತಂಡದ ನೆಟ್ಸ್ ಅಭ್ಯಾಸದಲ್ಲಿ ಬೌಲಿಂಗ್ ನಡೆಸಲಿಲ್ಲ. ಕಳೆದ ತಿಂಗಳು ರಣಜಿ ಟ್ರೋಫಿ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಇಶಾಂತ್ ಈ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈಗ ಮತ್ತದೇ ಸಮಸ್ಯೆ ಅವರನ್ನು ಬಿಟ್ಟು ಬಿಡದೆ ಕಾಡಲಾರಂಭಿಸಿದೆ.