
ಬುಲೆಟ್ ಪ್ರಕಾಶ್ ಮಗಳ ಜವಬ್ದಾರಿ ಹೊತ್ತುಕೊಂಡ ದರ್ಶನ್ ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದೇನು...? ಈ ಸ್ಟೋರಿ ನೋಡಿ.
ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ 'ಡಿ ಬಾಸ್' ಎಂದು ಕರೆಯುತ್ತಾರೆ. ಇಂಥ ಜನಪ್ರಿಯ ಕಲಾವಿದನ ವ್ಯಕ್ತಿತ್ವದ ಬಗ್ಗೆ 'ಡೆಡ್ಲಿ ಸೋಮ' ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ ಒಂದೇ ಸಾಲಿನಲ್ಲಿ ವಿವರಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಸಿನಿಮಾ ಅಷ್ಟೇ ಅಲ್ಲ ರಿಯಲ್ ಲೈಫ್‌ನಲ್ಲಿ ಹಲವು ಕಾರ್ಯಗಳ ಮೂಲಕ ಗುರುತಿಸಿಕೊಂಡವರು ನಟ ದರ್ಶನ್. ಅವರು ಅರಣ್ಯ ಸಂರಕ್ಷಣೆಯ ವಿಚಾರದಲ್ಲೂ ಸದಾ ಮುಂದಿರುತ್ತಾರೆ, ಕೆಲವು ಪ್ರಾಣಿಗಳನ್ನು ಸಹ ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ. ನೊಂದವರ ಕಣ್ಣೀರು ಒರೆಸುತ್ತಾರೆ. ಸಹಾಯ ಕೋರಿ ಬಂದವರಿಗೆ ನೆರವು ನೀಡುತ್ತಾರೆ. ಫೋಟೋಗ್ರಫಿಯಲ್ಲೂ 'ಚಾಲೆಂಜಿಂಗ್ ಸ್ಟಾರ್ 'ಗೆ ಆಸಕ್ತಿ ಇದೆ. ಇದೆಲ್ಲವನ್ನು ಹೊರತುಪಡಿಸಿ ಅವರಿಗೆ ಗೆಳೆಯರು ಎಂದರೆ ಪಂಚಪ್ರಾಣ. ತುಂಬ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ನಿಂತ ಕಲಾವಿದ. ಇಷ್ಟೆಲ್ಲ ವಿಶೇಷ ಗುಣಗಳನ್ನು ಹೊಂದಿರುವ ದರ್ಶನ್ ಅವರು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತಾರೆ. ಹಾಗಾದರೆ ಅವರ ಬಗ್ಗೆ ಒಂದೇ ಸಾಲಿನಲ್ಲಿ ವಿವರಿಸಲು ಸಾಧ್ಯವೇ? ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಅವರಿಗೆ ಇದು ಸಾಧ್ಯವಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ 'ಚಾಲೆಂಜಿಂಗ್ ಸ್ಟಾರ್' ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ನಡೆದ ಮಾತುಕತೆ ನಡುವೆ ಈ ವಿಚಾರ ಪ್ರಸ್ತಾಪ ಆಯಿತು.
ಮಾಸ್ ಸಿನಿಮಾಗಳಿಂದಲೇ ಹೆಸರಾದವರು ನಿರ್ದೇಶಕ ರವಿ ಶ್ರೀವತ್ಸ. ಅದಿತ್ಯ ನಟನೆಯ 'ಡೆಡ್ಲಿ ಸೋಮ' ಸಿನಿಮಾದಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು. 'ಗಂಡ ಹೆಂಡತಿ', 'ಡೆಡ್ಲಿ 2', 'ದಶಮುಖ' ಮುಂತಾದ ಚಿತ್ರಗಳಿಗೂ ರವಿ ಶ್ರೀವತ್ಸ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡದ ಎಲ್ಲ ಸ್ಟಾರ್ ನಟರನ್ನೂ ಅವರು ಹತ್ತಿರದಿಂದ ಕಂಡಿದ್ದಾರೆ. ಇಷ್ಟು ವರ್ಷಗಳ ಅನುಭವದ ಆಧಾರದ ಮೇಲೆಯೇ ಅವರು ದರ್ಶನ್ ವ್ಯಕ್ತಿತ್ವದ ಗುಣಗಾನ ಮಾಡಿದ್ದಾರೆ. ನಟ ಬುಲೆಟ್ ಪ್ರಕಾಶ್ ನಿಧನರಾದ ಹಿನ್ನೆಲೆಯಲ್ಲಿ ಅವರು ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕಾಯಿತು. ದರ್ಶನ್ ಮತ್ತು ಬುಲೆಟ್ ಪ್ರಕಾಶ್ ನಡುವೆ ಒಂದು ಕಾಲದಲ್ಲಿ ಇದ್ದ ಸ್ನೇಹವನ್ನೂ ರವಿ ಶ್ರೀವತ್ಸ ನೆನಪಿಸಿಕೊಂಡರು.
ಬುಲೆಟ್ ಪ್ರಕಾಶ್ ನಿಧನರಾದ್ದರಿಂದ ಅವರ ಪುತ್ರಿಯ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ದರ್ಶನ್ ಭರವಸೆ ನೀಡಿದರು. ಈ ನಿರ್ಧಾರಕ್ಕೆ ರವಿ ಶ್ರೀವತ್ಸ ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. 'ದರ್ಶನ್ ಸರ್, ಅವನು ನಿಮ್ಮಿಂದ ದೂರ ಆದ್ಮೇಲೆ ತುಂಬ ನೊಂದಿದ್ದ! ಆ ದಿನಗಳಲ್ಲೇ ಅವನು ದೇವರಿಗೆ ಹತ್ತಿರ ಆಗಲಿಕ್ಕೆ ಶುರುವಾದ!! ಇದೇ ಸತ್ಯ. ನಿನ್ನೆ ನೀವು ಅವನ ಕುಟುಂಬದ ಬಗ್ಗೆ, ಆ ಮಗಳ ಬಗ್ಗೆ ಆಡಿದ ಮಮಕಾರದ ನುಡಿಗಳು, ಎಲ್ಲಾ ಕ್ಷಣದಲ್ಲೂ ಜೊತೆಗಿರ್ತೀನಿ ಅನ್ನೋ ಆ ಮಾತು ಕೊಟ್ರಲ್ಲಾ ಅಷ್ಟು ಸಾಕೂ, ನಗನಗ್ತಾ ಸ್ವರ್ಗ ಸೇರಿರುತ್ತೆ ಆ ಜೀವ' ಎಂದು ರವಿ ಶ್ರೀವತ್ಸ ಟ್ವೀಟ್ ಮಾಡಿದ್ದಾರೆ.
ರವಿ ಶ್ರೀವತ್ಸ ಮಾಡಿದ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಯೊಬ್ಬರು 'ನೀವು ಕಂಡ ದರ್ಶನ್ ವ್ಯಕ್ತಿತ್ವದ ಬಗ್ಗೆ ಹೇಳಿ ಸರ್' ಎಂದು ಬೇಡಿಕೆ ಇಟ್ಟರು. ಅದಕ್ಕೆ ಪ್ರತಿಯಾಗಿ ಅಭಿಮಾನಿಗಳನ್ನು ಖುಷಿ ಪಡಿಸುವಂತಹ ಮಾತುಗಳನ್ನೇ ಆಡಿದ್ದಾರೆ. 'ಯಾರ ತಂಟೇಗೂ ಹೋಗ್ದೇ ಇರೋ ದೇವರು, ತಿರುಗಿ ಬಿದ್ದರೇ ತಡೆದು ನಿಲ್ಸಕ್ಕಾಗದ ತೇರು' ಎಂದು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಅದನ್ನು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 'ಇಂಥ ಕಷ್ಟದ ಸಮಯದಲ್ಲಿ ಸಹಾಯಕ್ಕೆ ನಿಲ್ಲುವವನೇ ದೇವರು. ಅಂಥವರನ್ನು ಸ್ತುಥಿಸೋದರಲ್ಲಿ ತಪ್ಪೇನಿದೆ' ಎಂದು ರವಿ ಶ್ರೀವತ್ಸ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವು ಬಗೆಯಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.