ಸಿಎಎ ಕಿಚ್ಚಿಗೆ ಹೊತ್ತಿ ಉರಿದ ಈಶಾನ್ಯ ದೆಹಲಿ : ಹೆಡ್ ಕಾನ್ ಸ್ಟೇಬಲ್ ಸೇರಿ ನಾಲ್ವರ ಸಾವು.

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆ ಸೋಮವಾರ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಪೌರತ್ವ ಕಾಯ್ದೆ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು ಅನೇಕ ಜನರಿಗೆ ಗಾಯಗಳಾಗಿವೆ. ಸದ್ಯ ಈಶಾನ್ಯ ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ಫ್ಯೂ ಜಾರಿ ಮಾಡಲಾಗಿದೆ.

ದೆಹಲಿಯ ಗೋಕುಲ್ ಪುರಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ನಡೆದಿದೆ. ಘರ್ಷಣೆಯಲ್ಲಿ ಕಾನ್ಸ್ಟೆಬಲ್ ರತನ್ ಲಾಲ್ ಸೇರಿದಂತೆ ನಾಲ್ಕು ಜನ ಮೃತಪಟ್ಟಿದ್ದಾರೆ. ಇನ್ನು ಅನೇಕ ಜನರಿಗೆ ಗಾಯಗಳಾಗಿದ್ದು ಚಿಂತಾಜನಕ ಸ್ಥಿತಿಯಲಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ದೆಹಲಿಯ ಗೋಕುಲ್ ಪುರಿ ,ಜಾಫರಾಬಾದ್ , ಚಾಂದ್ ಬಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದೀತ್ತು.

ಇನ್ನು ನಮಸ್ತೆ ಟ್ರಂಪ್ ಕಾರ್ಯಕ್ರಮ ಮುಗಿಸಿ ದೆಹಲಿಗೆ ವಾಪಸಾದ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಗಲಭೆಯ ಸಂಪೂರ್ಣ ಮಾಹಿತಿ ಪಡೆದಿದ್ದು,  ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೂಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.