
ಕೋಟೆನಾಡಿನ ರೈತರಿಗೆ ಕೃಷ್ಣಮೃಗಗಳ ಕಾಟ!
ಕೋಟೆನಾಡಿನ ರೈತರ ಬೆಳೆಗಳಿಗೆ ಇವರೆಗೆ ಕೀಟಬಾಧೆ ಹಾಗೂ ನೀರಿನ ಅಭಾವ ಕಾಡುತ್ತಿತ್ತು. ಆದರೆ ಈಗ ಹೊಸ ಪ್ರಾಣಿಗಳ ಕಾಟ ರೈತರಿಗೆ ತಲೆನೋವು ತಂದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನ ಹೊಳೆ ಗ್ರಾಮದ ರೈತ ರಾಜೇಂದ್ರ ಎಂಬವರು ಸುಮಾರು 20ಕ್ಕೂ ಹೆಚ್ಚು ಎಕರೆಗಳಲ್ಲಿ ಕಡಲೆಬೆಳೆಯನ್ನು ಬೆಳೆದಿದ್ದಾರೆ. ಈ ಕಡಲೆಬೆಳೆಯನ್ನು ಕೃಷ್ಣಮೃಗ ಪ್ರತಿನಿತ್ಯ ತಿಂದು ಹಾಕುತ್ತಿವೆ. ಹೀಗಾಗಿ ರೈತ ರಾಜೇಂದ್ರ ಕಣ್ಣೀರು ಹಾಕುತ್ತಿದ್ದಾರೆ.
ಇದೇ ಗ್ರಾಮದ ರೈತರು ನೂರಾರು ಎಕರೆ ಜಮೀನಿನಲ್ಲಿ ಈ ಕಡಲೆಬೆಳೆಯನ್ನು ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಬಗ್ಗೆ ಮಾತನಾಡಿದ ರೈತರು, ಕೈಗೆ ಬಂದ ಬೆಳೆ ಇದೇ ರೀತಿ ದಿನನಿತ್ಯ ಕಡವೆ ಮತ್ತು ಕೃಷ್ಣಮೃಗಗಳ ಪಾಲಾಗುತ್ತಿದ್ದು, ನಮ್ಮ ಬೆಳೆ ನಾಶವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇರುವುದನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರೈತ ರಾಜೇಂದ್ರ, ಕಳೆದ ವರ್ಷ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದು ನಾಶವಾಗಿರುವ ಬೆಳಗ್ಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಂಬಂಧಪಟ್ಟ ದಾಖಲೆಗಳನ್ನು ನಮ್ಮಿಂದ ಪಡೆದುಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪರಿಹಾರ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹಿರಿಯೂರು ಅರಣ್ಯ ವಲಯ ಅಧಿಕಾರಿ ಶ್ರೀಹರ್ಷ ಪ್ರತಿಕ್ರಿಯಿಸಿದ್ದು, ಈ ಭಾಗವು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ಭಾಗವಾಗಿರುವುದರಿಂದ ಇಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಾಣತೊಡಗಿವೆ. ಅವುಗಳನ್ನು ನಾಶ ಮಾಡುವುದು ಕಾನೂನು ಬಾಹಿರ. ಹಾಗಾಗಿ ಇವುಗಳಿಂದ ನಷ್ಟಕ್ಕೊಳಗಾದ ರೈತರು ಕಛೇರಿಗೆ ಧಾವಿಸಿ ಅವರ ಬೆಳೆ ನಾಶದ ಬಗ್ಗೆ ದಾಖಲಾತಿಗಳನ್ನು ಒದಗಿಸಿದರೆ, ನಾವು ಇ-ಆಫ್ ಎಂಬ ಒಂದು ಹೊಸ ಯೋಜನೆ ಅಡಿಯಲ್ಲಿ ಆ ರೈತರಿಗೆ 15ರಿಂದ 30 ದಿನಗಳ ಒಳಗೆ ನಷ್ಟವಾದ ಬೆಳೆಗೆ ನೇರವಾಗಿ ರೈತರ ಖಾತೆಗೆ ಪರಿಹಾರವನ್ನು ಕೊಡಲಾಗುವುದು ಎಂಬ ಭರವಸೆ ನೀಡಿದ್ದಾರೆ.