2.jpeg)
ಬೆಳ್ತಂಗಡಿಯಲ್ಲಿ ಬಲೆಗೆ ಬಿದ್ದ ದಂತಚೋರರ ಜಾಲ: 30 ಲ.ರೂ ಮೌಲ್ಯದ ಎರಡು ದಂತ ಸೇರಿ ಇಬ್ಬರ ವಶ
ಬೆಳ್ತಂಗಡಿ: ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಆನೆ ದಂತ ಸಾಗಿಸುತ್ತಿದ್ದಆರೋಪಿಗಳ ಸಹಿತ ಎರಡು ದಂತ ವಶ ಪಡಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಎಂಬಲ್ಲಿ ಕಾರ್ಯಚರಣೆ ನಡೆಸಿ, ಎರಡು ಅನೆ ದಂತ ಮತ್ತು ಓಮ್ನಿ ಕಾರಿನ ಜೊತೆಗೆ ಇಬ್ಬರು ಅರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯ ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ದಿನೇಶ ಪಿ.ಕೆ. (33) ಹಾಗೂ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮ ಕುಂಬರಡಿ ನಿವಾಸಿ ಕುಮಾರ.ವಿ (37) ಬಂಧಿತ ಆರೋಪಿಗಳು.
ಮಂಗಳವಾರ ಸಂಜೆ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬಂದಿ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ, ರಾಧಕೃಷ್ಣ ರವರು ದಾಳಿ ನಡೆಸಿ ಅಂದಾಜು 30 ಲಕ್ಷ ರೂ. ಮೌಲ್ಯದ 2 ಆನೆದಂತಗಳೊಂದಿಗೆ ಅರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಪುದುವೆಟ್ಟು, ನೆರಿಯಾ, ದಿಡುಪೆ, ಚಾರ್ಮಾಡಿ ಪರಿಸರದಲ್ಲಿ ಆನೆಗಳ ಓಡಾಟ ಹೆಚ್ಚಿರುವ ನಡುವೆಯೇ ಆನೆದಂತ ಚೋರರ ಸೆರೆಯಾಗಿರುವುದಿರಿಂದ ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ.
ಕಳೆದ ಸೆಪ್ಟೆಂಬರ್ 18 ರಂದು ಉಜಿರೆ ಸುರ್ಯ ಸಮೀಪ ಮನೆಯೊಂದರ ಶೆಡ್ ನಲ್ಲಿ ಇರಿಸಲಾಗಿದ್ದ 51.730 ಕೆ.ಜಿ. ತೂಕದ 10 ಆನೆದಂತವನ್ನು ವಶಪಡಿಸಿ ಮೂವರು ಆರೋಪಿಗಳನ್ನು ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳ ಜೈಲಿಗಟ್ಟಿದ್ದರು.
ಇದೀಗ ಮತ್ತೊಂದು ಪ್ರಕರಣ ದಾಖಲಾಗುತ್ತಲೇ ಈ ಅಕ್ರಮ ಜಾಲ ಎಲ್ಲೆಡೆ ವಿಸ್ತರಿಸಿರುವುದರ ಬಗ್ಗೆ ಇಲಾಖೆ ಮತ್ತಷ್ಟು ತನಿಖೆ ಚುರುಕುಗೊಂಡಿದೆ.
ಸದ್ಯ ಆರೋಪಿಗಳನ್ನು ನ್ಯಾಯಲಕ್ಕೆ ಹಾಜರುಪಡಿಸಲಾಗಿದೆ.