
ಉತ್ತರ ಪ್ರದೇಶ: ಪ್ರಾಚೀನ ದೇಗುಲದ 4 ವಿಗ್ರಹ ಕಳವು
ಮಹೋಬಾ,– ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕುಲ್ಪಹಾರ್ ಪ್ರದೇಶದ ಐದು ಶತಮಾನದ ಹಳೆಯ ದೇವಾಲಯದಿಂದ ಕಳ್ಳರು ನಾಲ್ಕು ಅಮೂಲ್ಯವಾದ ಪ್ರಾಚೀನ ಮತ್ತು ಪುರಾತತ್ತ್ವ ಶಾಸ್ತ್ರದ ವಿಗ್ರಹಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸುಂಗೀರಾ ಗ್ರಾಮದ ‘ಧನುಷ್ಧಾರಿ’ ದೇವಸ್ಥಾನದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅವಧ್ ಸಿಂಗ್ ತಿಳಿಸಿದ್ದಾರೆ.
ಅರ್ಚಕ ರಘುಬರ್ ದಾಸ್ ಅವರ ಪ್ರಕಾರ, ಕಳ್ಳರು ದೇವಾಲಯದ ಮುಖ್ಯದ್ವಾರದ ಬೀಗವನ್ನು ಮುರಿದು ದೇವಾಲಯದ ಒಳಗೆ ಇರಿಸಿದ್ದ ‘ಅಷ್ಟ ಲಕ್ಷ್ಮಿ ನಾರಾಯಣ, ರಾಧಾ ಕೃಷ್ಣ ಮತ್ತು ಇನ್ನೊಂದು ವಿಗ್ರಹವನ್ನು ಕದ್ದಿದ್ದಾರೆ.
ಮಂಗಳವಾರ ಸಂಜೆ ಶಯಾನಾರತಿಯ ನಂತರ,ಅರ್ಚಕರು ದೇವಾಲಯದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು.
ಬುಧವಾರ ಬೆಳಿಗ್ಗೆ ಎಂದಿನಂತೆ ದೇವಾಲಯದ ಬಳಿ ಆಗಮಿಸಿದಾಗ ಬೀಗ ಮುರಿದು ವಿಗ್ರಹಗಳನ್ನು ಕಳವು ಮಾಡಿದ್ದು ಪತ್ತೆಯಾಗಿದೆ.
ಅರ್ಚಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಮೂರೂವರೆ ಅಡಿ ಎತ್ತರವಿರುವ ಲಕ್ಷ್ಮಿ-ನಾರಾಯಣ್ ವಿಗ್ರಹವು ಅತ್ಯಂತ ಪ್ರಾಚೀನ ಮತ್ತು ‘ಅಷ್ಟದು’ಯಿಂದ ಮಾಡಲ್ಪಟ್ಟಿದೆ ಮತ್ತು ಆದ್ದರಿಂದ ಅವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಮೌಲ್ಯಯುತವೆಂದು ಪರಿಗಣಿಸಲಾಗಿದೆ.
ಮಾಹಿತಿ ಪಡೆದ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಕುಮಾರ್ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.