
ಡಬಲ್ ಇಂಜಿನ್ ಸರ್ಕಾರವೇಕೆ 3 ವರ್ಷಗಳಲ್ಲಿ ಮೇಕೆದಾಟು ಯೋಜನೆ ಪೂರ್ಣಗೊಳಿಸಲಿಲ್ಲ: ಸಿದ್ದರಾಮಯ್ಯ
ಮೈಸೂರು: ಮೇಕೆದಾಟು ಜಲಾಶಯ ಯೋಜನೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಯೋಜನೆ ವಿರೋಧಿಸಲು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರನ್ನು ಪ್ರಚೋದಿಸಿದ್ದಾರೆ ಎಂದು ಆರೋಪ ಮಾಡಿದೆ. ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡಸಿದ್ದಾರೆ. ಸಿ.ಟಿ.ರವಿ ಅವರು ಯೋಜನೆ ವಿರೋಧಿಸಲು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರನ್ನು ಪ್ರಚೋದನೆ ನೀಡುತ್ತಿದ್ದು, ಅಣ್ಣಾಮಲೈ ಬಿಜೆಪಿ ಕೇಂದ್ರ ನಾಯಕರ ಮೇಲೆ ಮೇಲುಗೈ ಸಾಧಿಸುತ್ತಿದ್ದಾರೆ. ಅಣ್ಣಾಮಲೈ ತೀವ್ರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡುತ್ತಿಲ್ಲ, ಮೇಕೆದಾಟು ಯೋಜನೆ ವಿಳಂಬಕ್ಕೆ ಇವರಿಬ್ಬರೇ ಕಾರಣ ಎಂದು ಆರೋಪಿಸಿದ್ದಾರೆ.
ಮೇಕೆದಾಟು ಜಲಾಶಯದ ಯೋಜನೆಗೆ 1962ರಲೇ ಪ್ರಸ್ತಾವನೆ ಇತ್ತು. ಬಳಿಕ ಕಾಂಗ್ರೆಸ್ ಸರ್ಕಾರ 5,912 ಕೋಟಿ ರೂ.ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತು. ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಪರಿಸರಕ್ಕೆ ಅಗತ್ಯವಿರುವ 9,000 ಕೋಟಿ ರೂ.ಗೆ ಪರಿಷ್ಕೃತ ಡಿಪಿಆರ್ ಸಿದ್ಧಡಿಸಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತದೆ, ಆದರೆ ಯೋಜನೆಗೆ ಅನುಮತಿ ಪಡೆಯುವಲ್ಲಿ ಅದು ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ. ಕಳೆದ ಮೂರು ವರ್ಷಗಳಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಯೋಜನೆಯನ್ನೇಕೆ ಪೂರ್ಣಗೊಳಿಸುವಲಲಿ ವಿಫಲವಾಗಿದೆ? ಎಂದು ಪ್ರಶ್ನಿಸಿದ್ದಾರೆ.
1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕಾವೇರಿ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. 2017 ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕೇಂದ್ರದ ಅನುಮತಿಗಾಗಿ ಕಳುಹಿಸಿತ್ತು. 3/7#NammaNeeruNammaHakku
— Siddaramaiah (@siddaramaiah) January 2, 2022
;
ಇದೇ ವೇಳೆ ಮೇಕೆದಾಟು ನೀರು ಬಯಸುವ ಚಾಮರಾಜನಗರ ಜನತೆಯ ಪ್ರತಿ ಕುಟುಂಬದಿಂದ ಒಬ್ಬರಾದರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಯೋಜನೆ ಕುರಿತು ಭಾರೀ ದಾಖಲೆಗಳಿವೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ಬಹಿರಂಗ ಪಡಿಸಲಿ. ಜನರಿಗೂ ಸತ್ಯಾಸತ್ಯತೆಗಳು ತಿಳಿಯಲಿ ಎಂದು ಹೇಳಿದ್ದಾರೆ. ಕಳೆದ ವರ್ಷ ಆಮ್ಲಜನಕ ದುರಂತದಲ್ಲಿ 36 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಈ ಸಂದರ್ಭದಲ್ಲಿ ಪಕ್ಷದ ಸದಸ್ಯರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಸರ್ಕಾರದ ವೈಫಲ್ಯಗಳನ್ನು ಬಹಿರಂಗ ಪಡಿಸಿದ್ದರು. ದುರಂತದಲ್ಲಿ 36ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಒಪ್ಪಿಕೊಂಡಾಗ ಕೇವಲ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳುವ ಸರ್ಕಾರ ತನ್ನ ವೈಫಲ್ಯವನ್ನು ಬಹಿರಂಗಪಡಿಸಿತ್ತು. ಜಿಲ್ಲಾ ಆಸ್ಪತ್ರೆ ಸತ್ಯ ಹೇಳುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಆಗ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಅವರ ಸುಳ್ಳುಗಳನ್ನು ಬಯಲಿಗೆಳೆದಿದ್ದರು ಎಂದು ತಿಳಿಸಿದ್ದಾರೆ
By: Yashaswini Srinivas