ಹೊಸವರ್ಷಕ್ಕೆ ಮಧ್ಯರಾತ್ರಿ 2 ಗಂಟೆವರೆಗೆ ಬೆಂಗಳೂರು ಮೆಟ್ರೋ ಸಂಚಾರ
ಬೆಂಗಳೂರು : ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ದೇಶವೇ ಸಜ್ಜಾಗುತ್ತಿದೆ. 2020ಕ್ಕೆ ಕಾಲಿಡಲು ಕೇವಲ 4 ದಿನಗಳು ಬಾಕಿ ಇವೆ. ದೇಶಾದ್ಯಂತ ಡಿ. 31ರ ರಾತ್ರಿ ಸಂಭ್ರಮಾಚಾರಣೆ ಮುಗಿಲು ಮುಟ್ಟಿರುತ್ತದೆ. ಅದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ, ಹೊಸ ವರ್ಷವನ್ನು ವಿಶೇಷವಾಗಿ, ರಾತ್ರಿಯಿಡೀ ಕುಣಿದು, ಪಾರ್ಟಿ ಮಾಡಿ ಸಂಭ್ರಮಿಸುವ ಮೂಲಕ ಆಹ್ವಾನಿಸಲಾಗುತ್ತದೆ. ಈ ಬಾರಿ ಕೂಡ ಡಿ. 31ರಂದು ಹೊಸ ವರ್ಷಾಚರಣೆ ಜೋರಾಗೇ ಇರುವುದರಿಂದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋಗಳು ಸಂಚರಿಸಲಿವೆ.
ಡಿ. 31ರಂದು ಮಧ್ಯರಾತ್ರಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಬಳಿ ಸಂಭ್ರಮಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಜನ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗಿ ಟ್ರಿನಿಟಿ ಮೆಟ್ರೋ ಸ್ಟೇಷನ್, ಎಂಜಿ ರಸ್ತೆ, ಕಬ್ಬನ್ ಪಾರ್ಕಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಈ ಮೂರು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ. ಮಹಿಳಾ ಪ್ರಯಾಣಿಕರು ಹೊಸ ವರ್ಷದ ಹಿಂದಿನ ರಾತ್ರಿ ಸುರಕ್ಷತಾ ದೃಷ್ಟಿಯಿಂದ ಮಹಿಳೆಯರಿಗೆ ಮೀಸಲಾಗಿರುವ ಬೋಗಿಗಳಲ್ಲಿ ಸಂಚರಿಸಬಹುದು. ಒಂದುವೇಳೆ ಆ ಬೋಗಿಗಳಲ್ಲಿ ಜಾಗ ಇಲ್ಲದಿದ್ದರೆ ಮುಂದಿನ ರೈಲು ಬರುವವರೆಗೆ ಕಾಯಬಹುದು. ಹೊಸ ವರ್ಷದ ಹಿನ್ನೆಲೆ ಕೆಲವೇ ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಹೀಗಾಗಿ, ಹೆಚ್ಚು ಹೊತ್ತು ಕಾಯಬೇಕಾದ ಅಗತ್ಯವೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.