ಡಾರ್ಲಿಂಗ್ ಕೃಷ್ಣ ಅವರ 'ಲೋಕಲ್ ಟ್ರೈನ್' ಆಡಿಯೋ ಲಾಂಚ್ ಮಾಡಿದ 'ಪವರ್ ಸ್ಟಾರ್'....!

ಡಾರ್ಲಿಂಗ್ ಕೃಷ್ಣ ಅಭಿನಯದ 'ಲೋಕಲ್ ಟ್ರೈನ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಿನ್ನೆ ಸಂಜೆ 6ಗಂಟೆಗೆ ಎಸ್.ಆರ್.ವಿ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ವಿಶೇಷ.

ಲೋಕಲ್ ಟ್ರೈನ್ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್ ಜನ್ಯಾ ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಲಕ್ಕಿ ಸಾಂಗ್ ಆಡಿಯೋ ಲಾಂಚ್' ಎನ್ನುವ ಮೂಲಕ ಚಿತ್ರದ ಆಡಿಯೋ ರಿಲೀಸ್ ಮಾಡಿದರು. ನಂತರ ವೇದಿಕೆಯಲ್ಲಿ ಮಾತನಾಡಿದ ಅಪ್ಪು ಸಿನಿಮಾಗೆ ಹಾಗೂ ನಟ ಕೃಷ್ಣ ಅವರಿಗೆ ಶುಭ ಕೋರಿದರು. ಈ ವೇಳೆ ಚಿತ್ರದ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಬಗ್ಗೆ ಸಹ ಪ್ರಶಂಸೆ ವ್ಯಕ್ತಪಡಿಸಿದರು.

ಆಲ್ಮಾ ನ್ಯೂಸ್ ಜೊತೆ ಮಾತನಾಡಿದ ಚಿತ್ರದ ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು,  'ಮೊದಲಿನಿಂದಲೂ ನಾನು ಆ್ಯಕ್ಷನ್ ಸಿನಿಮಾಗಳನ್ನು ಮಾಡ್ತಿದ್ದೇನೆ, ಆದರೆ ಇದರಲ್ಲಿ ಪ್ರಮುಖವಾಗಿ ಆ್ಯಕ್ಷನ್ ಗೆ ಒತ್ತು ಕೊಡಲಾಗಿದೆ ಎಂದು ಹೇಳಿದರು. ಇನ್ನು ತಮ್ಮ ಪಾತ್ರ ಕುರಿತು, 'ನಾನು ಈ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರ ನಿರ್ವಹಿಸಿದ್ದು, ಚಿತ್ರಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ' ಎಂದು  ಹೇಳಿದರು. ನಂತರ ಅರ್ಜುನ್ ಜನ್ಯಾ ಬಗ್ಗೆ ಮಾತನಾಡಿದ ನಟ ಕೃಷ್ಣ, 'ಜನ್ಯಾ ಅವರ ಜೊತೆ ನನಗಿದು ಎರಡನೇ ಸಿನಿಮಾ, ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಹಾಡುಗಳನ್ನು ತುಂಬಾ ಚೆನ್ನಾಗಿ ಕಂಪೋಸ್ ಮಾಡಿದ್ದಾರೆ. ಅದರಲ್ಲಿ 'ಸನಿಹ ಸನಿಹ' ಎಂಬ ಹಾಡು ನನಗೆ ಬಹಳ ಇಷ್ಟ' ಎಂದು ಹೇಳಿದರು.

ಈ ಚಿತ್ರದ ಹಾಡುಗಳ ಲಿರಿಕ್ಸ್ ಬರೆದವರು, ಜಯಂತ್ ಕಾಯ್ಕಿಣಿ ಮತ್ತು ವಿ.ನಾಗೇಂದ್ರ ಪ್ರಸಾದ್. ಆಡಿಯೋ ಲಾಂಚ್ ಸಂದರ್ಭದಲ್ಲಿ ಜಯಂತ್ ಕಾಯ್ಕಿಣಿ ಅವರು ಬರೆದ 'ಸನಿಹ ಸನಿಹ' ಹಾಡು ಮತ್ತು ವಿ.ನಾಗೇಂದ್ರ ಪ್ರಸಾದ್ ಬರೆದ 'ವಾಟ್ಸಾಪ್' ಹಾಡುಗಳನ್ನು ಸಹ ಪ್ಲೇ ಮಾಡಿದರು. ಚಿತ್ರದ  ಹಾಡುಗಳಿಗೆ ಕೊರಿಯೋಗ್ರಾಫರ್ಸ್ ಆಗಿ  ಹೆಜ್ಜೆ ಹಾಕಿಸಿದವರು ಚಿನ್ನಿ ಪ್ರಕಾಶ್ ಮಾಸ್ಟರ್, ರಾಜು ಸುಂದರಂ ಹಾಗೂ ಗಣೇಶ್. 

ಮೀನಾಕ್ಷಿ ದೀಕ್ಷಿತ್ ಹಾಗೂ ಎಸ್ಟರ್ ನರೋನಾ 'ಲೋಕಲ್ ಟ್ರೇನ್' ಚಿತ್ರದ ನಾಯಕಿಯರಾಗಿ ಕಂಗೊಳಿಸಿದ್ದಾರೆ. ಇಬ್ಬರು ನಾಯಕರೊಳಗೆ ನಿನ್ನೆ ನಡೆದ ಆಡಿಯೋ ಲಾಂಚ್ಗೆ ಮೀನಾಕ್ಷಿ ದೀಕ್ಷಿತ್ ಮಾತ್ರ ಉಪಸ್ಥಿತರಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ಇದು ನನ್ನ ಮೊದಲನೆ ಚಿತ್ರ. ಈ ಚಿತ್ರದಲ್ಲಿ ಪ್ರೀತಿ, ಆ್ಯಕ್ಷನ್, ಕಾಮಿಡಿ ಎಲ್ಲಾ ಚೆನ್ನಾಗಿ ಮೂಡಿಬಂದಿದ್ದು, ಎಲ್ಲರೂ ಈ ಚಿತ್ರ ನೋಡಿ ಎಂದು ನಾನು ಕೋರಿಕೊಳ್ಳುತ್ತೇನೆ ಎಂದರು.

ನಿರ್ಮಾಪಕರಾದ ಎಸ್.ಹೆಚ್.ವಾಳ್ಕೆ ಅವರು ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ, ನಾಲ್ಕು ವರ್ಷ ಗ್ಯಾಪ್ ಆದ ಕಾರಣ ಸಿನಿಮಾ ನಿರ್ಮಾಣದ ಬಜೆಟ್ ಜಾಸ್ತಿ ಆಗಿದೆ. ಆದರೂ ಯಾವುದಕ್ಕೂ ಕೊರತೆ ಇಲ್ಲದೇ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು. ಈ ಚಿತ್ರದ ನಿರ್ದೇಶಕರಾದ ವೈ.ಎನ್.ರುದ್ರಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಸಿನಿಮಾ ರಿಲೀಸ್ ಡೇಟ್ ಇನ್ನೂ ನಿಗದಿಯಾಗಿಲ್ಲ. ಆದರೆ ಶೀಘ್ರದಲ್ಲೇ ರಿಲೀಸ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದರು.