ಧೋನಿ ಸ್ಥಾನ ತುಂಬಲು ರಾಹುಲ್ ಅರ್ಹರೇ? ಪಂತ್‌ಗಿಲ್ಲ ಅವಕಾಶ; ಕೆಎಲ್ ರಾಹುಲ್‌ಗೆ ಸಿಗಲಿದೆ ಧೋನಿ ಪಟ್ಟ!
ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದ್ದ ಟೀಮ್ ಇಂಡಿಯಾ ಕೊನೆಗೂ ಉತ್ತರ ಕಂಡು ಹುಡುಕಿದೆ. ಕರ್ನಾಟಕದ ಕೆಎಲ್ ರಾಹುಲ್ ಅವರು ಮಾಜಿ ನಾಯಕ ಹಾಗೂ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿ ಎನಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್ ಆಯ್ಕೆಯು ಆಕಸ್ಮಿಕವೆನಿಸಿತ್ತು. ಉದಯೋನ್ಮುಖ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ಸಮಸ್ಯೆಗೊಳಗಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿದ್ದರು.
ವಿಕೆಟ್ ಹಿಂದುಗಡೆ ರಾಹುಲ್ ಹೆಚ್ಚು ಪ್ರಭಾವಿ ಎನಿಸಿದ್ದಾರೆ. ಅಲ್ಲದೆ ಪಂದ್ಯದಿಂದ ಪಂದ್ಯಕ್ಕೆ ವಿಕೆಟ್ ಕಿಂದುಗಡೆಯ ಕೌಶಲ್ಯದಲ್ಲಿ ಸುಧಾರಣೆಯನ್ನು ಕಂಡಿದ್ದಾರೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ತಂಡಕ್ಕೆ ಹೆಚ್ಚಿನ ಸಮತೋಲನ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಓಪನರ್ ಸ್ಥಾನಕ್ಕೆ ಶಿಖರ್ ಧವನ್ ಜೊತೆಗೆ ಪೈಪೋಟಿಗಿಳಿದಿದ್ದ ರಾಹುಲ್, ಕೊನೆಗೂ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಪ್ರಶ್ನೆಗೆ ಉತ್ತರವಾಗಿದ್ದಾರೆ. ಕೆಳ ಕ್ರಮಾಂಕದಲ್ಲೂ ರಾಹುಲ್ ಬೀಸಿರುವ ಬ್ಯಾಟ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.