ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ನಿಧನ

ಬೆಂಗಳೂರು: ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ನಿಧನರಾಗಿದ್ದಾರೆ. ತ್ರಿಲೋಕನಾಥ ಚತುರ್ವೇದಿ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾದರು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಆಗಸ್ಟ್ 2002ರಿಂದ 20 ಆಗಸ್ಟ್ 2007ವರೆಗೆ ರಾಜ್ಯಪಾಲರಾಗಿದ್ದರು. ಇದಕ್ಕೂ ಮುನ್ನ ಭಾರತದ ಮಹಾಲೇಖಪಾಲರಾಗಿ 1984 ರಿಂದ 1989ರವರೆಗೆ ಕಾರ್ಯನಿರ್ವಹಿಸಿದ್ದರು. 1990ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಜನವರಿ 18, 1929ರಂದು ಜನಿಸಿದ ಚತುರ್ವೇದಿ ಅವರು 2004ರಲ್ಲಿ ಕೇರಳದ ರಾಜ್ಯಪಾಲರಾಗಿ ಕೂಡಾ ಕಾರ್ಯ ರ್ನಿವಹಿಸಿದ್ದರು. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿಗಳ ಹೆಸರು ಕೇಳಿ ಬಂದಿತ್ತು.

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಟಿ.ಎನ್ ಚತುರ್ವೇದಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಉತ್ತಮ ಆಡಳಿತಗಾರರು, ನಿಜವಾದ ರಾಷ್ಟ್ರೀಯವಾದಿ ಎಂದಿದ್ದಾರೆ.