ಮಾರ್ಚ್ 31ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್: ಬಿ.ಎಸ್.ವೈ ಆದೇಶ...
ಕೊರೋನಾ ಸಾಂಕ್ರಾಮಿಕ ರೊಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾರ್ಚ್ 24ರಿಂದ ಮಾರ್ಚ್ 31ರವರೆಗೆ ಕರ್ನಾಟಕದಾದ್ಯಂತ ಕರ್ಫ್ಯೂ ಮಾದರಿಯ ಲಾಕ್ ಡೌನ್ ಆದೇಶ ಹೊರಡಿಸಿದ್ದಾರೆ. ಜನರಲ್ಲಿ ಈ ಆದೇಶದ ಕಟ್ಟುನಿಟ್ಟಿನ ಪಾಲನೆಯನ್ನು ಕೋರಿ ಬಿ.ಎಸ್.ವೈ ಟ್ವೀಟ್ ಕೂಡ ಮಾಡಿದ್ದಾರೆ.
ಈ ಮುಂಚೆ ಕರೋನಾ ಸೋಂಕಿತ 9ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಿದ್ದ ಕರ್ಫ್ಯೂ ಮಾದರಿಯ ಲಾಕ್ ಡೌನ್, ಇದೀಗ ಇಡೀ ಕರ್ನಾಟಕಕ್ಕೆ ಅನ್ವಯಿಸುತ್ತದೆ. ಅಗತ್ಯ ವಸ್ತುಗಳಾದ ತರಕಾರಿ, ರೇಷನ್, ಹಾಲು, ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ ಉಳಿದ ದಿನನಿತ್ಯಕ್ಕೆ ಅವಶ್ಯವಿಲ್ಲದ ಎಲ್ಲಾ ಅಂಗಡಿಗಳು, ಬಾರ್ ಗಳು, ಸರ್ಕಾರಿ ಸಾರಿಗೆ, ಆಟೋ, ಕ್ಯಾಬ್, ಬೆಂಗಳೂರಿನಲ್ಲಿನ ನಮ್ಮ ಮೆಟ್ರೋ ಎಲ್ಲವೂ ಮಾರ್ಚ್ 31ರವರೆಗೆ ಬಂದ್ ಆಗಿರುತ್ತದೆ.
ಈ ಅವಧಿಯಲ್ಲಿ ಜನರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರಕೂಡದು. ಹಾಗು ಈ ಅವಧಿಯಲ್ಲಿ, ಸೆಕ್ಷನ್ 144 ಕೂಡ ಕರ್ನಾಟಕದಾದ್ಯಂತ ಜಾರಿಯಲ್ಲಿರುತ್ತದೆ. ಸೆಕ್ಷನ್ 144 ಪ್ರಕಾರ, 4 ಅಥವಾ ಅದಕ್ಕೂ ಅಧಿಕ ಜನರ ಗುಂಪು ಸೇರುವುದು ನಿಷೇದ್ಧ. ಸರ್ಕಾರದ ಈ ಎಲ್ಲ ಆದೇಶಗಳನ್ನು ಜನರು ಪಾಲಿಸುವಂತೆ ನಿಗಾ ಇಡಲು ಪೊಲೀಸರನ್ನು ನೇಮಿಸಲಾಗಿದೆ.
ಇನ್ನು ಕರ್ನಾಟಕ ಸರ್ಕಾರ ಹೊರಡಿಸಿರುವ ಯಾವುದೇ ಆದೇಶವನ್ನು ಮೀರಿದಲ್ಲಿ ಅಥವಾ ಲಾಕ್ ಡೌನ್ ಅವಧಿಯಲ್ಲಿ ಅನವಶ್ಯಕವಾಗಿ ಜನರು ಹೊರಗೆ ಬಂದಲ್ಲಿ ಪೊಲೀಸರಿಂದ, ಅಂಥವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು 33ಕ್ಕೆ ಏರಿರುವುದರಿಂದ, ರಾಜ್ಯದ ಜನರಿಗೆ ಈ ಆದೇಶದ ಕಟ್ಟುನಿಟ್ಟಿನ ಪಾಲನೆಯ ಅಗತ್ಯವಿದೆ.