ಬಡ್ತಿ ಹಾಗೂ ನೇಮಕಾತಿಯಲ್ಲಿ ಮೀಸಲಾತಿ : ಸುಪ್ರೀಮ್ ಆದೇಶ ಖಂಡಿಸಿದ ಮಲ್ಲಿಕಾರ್ಜುನ್ ಖರ್ಗೆ.
ಬೆಂಗಳೂರು : ಮೀಸಲಾತಿ ಮೂಲಭೂತ ಹಕ್ಕಲ್ಲ.ಉದ್ಯೋಗ ನೇಮಕಾತಿ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಮ್ ಕೋರ್ಟ್ ನೀಡಿದ್ದ ಆದೇಶವನ್ನು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ಮಲ್ಲಿಕಾರ್ಜುನ್ ಖರ್ಗೆ ಖಂಡಿಸಿದ್ದಾರೆ.
ಭಾನುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸರ್ಕಾರ ಮೀಸಲಾತಿ ವ್ಯವಸ್ಥೆಯನ್ನು ನಾಶಮಾಡಲು ಹೊರಟಿದೆ. ಮೊದಲಿನಿಂದಲೂ ಬಿಜೆಪಿ ಮೀಸಲಾತಿಯನ್ನು ವಿರೋಧಿಸಿಕೊಂಡೆ ಬಂದಿದೆ. ಈಗ ಸುಪ್ರೀಮ್ ಕೋರ್ಟ್ ಸಹ ಬಿಜೆಪಿ ಆಶಯಕ್ಕೆ ಪೂರಕವಾದ ತೀರ್ಪು ನೀಡಿದ್ದು, ಬಿಜೆಪಿಗೆ ತನ್ನ ಹಿಡನ್ ಅಜೇಂಡಾ ಜಾರಿಗೊಳಿಸುವುದು ಮತ್ತಷ್ಟು ಸುಲಭವಾಗಿದೆ ಎಂದು ಕಟುವಾಗಿ ಟೀಕಿಸಿದರು.
ಕೇಂದ್ರ ಸರ್ಕಾರ ಪರಿಶಿಷ್ಟರು ಹಾಗೂ ಹಿಂದುಳಿದವರ ರಕ್ಷಣೆಗೆ ಮುಂದಾಗಬೇಕು. ಈ ಪ್ರಕರಣವನ್ನು ಸಾಂವಿಧಾನಿಕ ಪೀಠದ ಎದುರು ಕೊಂಡೊಯ್ಯಬೇಕು. ಹಾಗೂ ಸದನದಲ್ಲಿ ಈ ಕುರಿತು ತಿದ್ದುಪಡಿಯನ್ನು ತರಬೇಕು ಎಂದು ಆಗ್ರಹಿಸಿದರು.