3ನೇ ಕ್ರಮಾಂಕಕ್ಕೆ ಮರಳುವ ಸೂಚನೆ ನೀಡಿದ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆಗೊಳಗಾಗಿದೆ. ಪಂದ್ಯದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದರ ಬಗ್ಗೆ ಕೊಹ್ಲಿಯನ್ನು ಕೇಳಿದಾಗ, "ಈ ಹಿಂದೆಯೂ ಹಲವು ಬಾರಿ ಚರ್ಚಿಸಲಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಎಲ್ ರಾಹುಲ್‌ರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಬದಲಾವಣೆ ತಂದಿದ್ದೆವು. ಆದರೆ ನಮ್ಮ ರಣತಂತ್ರ ಫಲಿಸಲಿಲ್ಲ. ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡಿದಾಗೆಲ್ಲ ಫಲಿತಾಂಶ ಉತ್ತಮವಾಗಿರಲಿಲ್ಲ. ನಾವಿದನ್ನು ಮರು ಆಲೋಚನೆ ಮಾಡಲಿದ್ದೇವೆ" ಎಂದು ಕೊಹ್ಲಿ ತಿಳಿಸಿದರು.

ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಮೂರನೇ ಕ್ರಮಾಂಕವನ್ನು ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದಕ್ಕೆ ಭಾರತದ ಬಹುತೇಕ ಮಾಜಿ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಿಎಸ್ ಲಕ್ಷ್ಮಣ್, ಸಂಜಯ್ ಮಂಜ್ರೇಕರ್, ಹರ್ಭಜನ್ ಸಿಂಗ್ ಹೀಗೆ ಎಲ್ಲರೂ ವಿರಾಟ್ ಕೊಹ್ಲಿ ನಿರ್ಧಾರವು ತಪ್ಪಾಗಿದ್ದು, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಕ್ಕೆ ಮುಂದಾಗಬಾರದಿತ್ತು ಎಂದಿದ್ದಾರೆ.ಟೀಮ್ ಇಂಡಿಯಾಗಾಗಿ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಬದಲಾವಣೆಯ ಅವಶ್ಯಕತೆಯೇ ಇರಲಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದರು.