ನನ್ನ ಮೈಮುಟ್ಟೋ ಧೈರ್ಯ ಯಾರಿಗಾದ್ರೂ? ಇದೆಯಾ: ಖಾರವಾಗಿ ಟ್ವೀಟ್ ಮಾಡಿದ ಜಗ್ಗಣ್ಣ
ಡಿ ಬಾಸ್ ಅಭಿಮಾನಿಗಳು ನವರಸ ನಾಯಕ ಜಗ್ಗೇಶ್ ಇರುವ ಸೆಟ್ ಗೆ ನುಗ್ಗಿ ಕ್ಷಮೆ ಯಾಚಿಸುವಂತೆ ಕೇಳಿದ್ದು, ಈಗ ಈ ವಿಷಯ ಮತ್ತೊಂದು ತಿರುವು ಪಡೆದುಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಜೊತೆ ಜಗ್ಗಣ್ಣ ಮಾತನಾಡಿ, ಕೊನೆಗೆ ಕ್ಷಮೆ ಕೇಳಿದ್ದರು. ಆದರೆ ಅಚಾನಕ್ಕಾಗಿ ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.
ಅಂಜುಬುರುಕನಂತೆ ಓಡಿ ಹೋಗಿಲ್ಲ
೮೦ ನೇ ದಶಕದಲ್ಲಿ ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವನು. ಕನ್ನಡ ಚಿತ್ರರಂಗದ ಮೇರು ನಟರಾದ ಅಣ್ಣಾವ್ರು, ವಿಷ್ಣುವರ್ಧನ್ ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್ ಜೊತೆಗೆ ಹೆಜ್ಜೆ ಇಟ್ಟು, ಅವರೊಂದಿಗೆ ಮಾತನಾಡಿ, ಜೀವನದಲ್ಲಿ ನೋವು, ನಲಿವು ಎಲ್ಲವನ್ನು ಅನುಭವಿಸಿದ್ದೇನೆ. ನಾನೇನು ಕಳ್ಳತನ, ದರೋಡೆ ಮಾಡಿ ಅಂಜುಬುರುಕನಂತೆ ಓಡಿ ಹೋಗಿಲ್ಲ, ಸೆಟ್ ನಲ್ಲಿ ಜನರ ಹತ್ತಿರ ಮಾತನಾಡಿದ್ದೇನೆ. ರಾತ್ರಿಯೂ ಸಹ ಫೋನ್ ನಲ್ಲಿ ಹುಡುಗರ ಜೊತೆ ಈ ವಿಚಾರದ ಕುರಿತು ಚರ್ಚಿಸಿದ್ದೇನೆ. ನಾನೇನು ಯಾರಿಗಾದ್ರೂ ನೋವು ನೀಡುವಂತೆ, ಮರ್ಡರ್ ಮಾಡುವಂತೆ, ವಂಚಿಸುವಂತೆ ಅಥವಾ ಹಗರಣದ ಬಗ್ಗೆ, ಕನ್ನಡ ನೆಲಕ್ಕೆ ದಕ್ಕೆ ತರುವಂತೆ ಮಾತನಾಡಿದ್ದೀನಾ ಎಂದು ವಿಡಿಯೋ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ.
ಕನ್ನಡಕ್ಕಾಗಿ ಸೇವೆ ಸಲ್ಲಿಸಿದ್ದೇನೆ
ನಾನು ಯಾವ ತಪ್ಪು ಮಾಡಿಲ್ಲ ಅಂದ ಮೇಲೆ ನಾನೇಕೆ ಹೆದರಿಕೊಂಡು ಮೂಲೆಯಲ್ಲಿ ಕೂಡಬೇಕು. ಯಾವುದೋ ಒಂದು ಕರೆಯಲ್ಲಿ ಮಾತನಾಡಿರುವ ಸಣ್ಣ ವಿಷಯವನ್ನಿಟ್ಟುಕೊಂಡು ಮಾದ್ಯಮದವರು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಜಗ್ಗೇಶ್ ಕಾಗೆ ಹಾರಿಸಿದರು ಎನ್ನುವ ಪದವನ್ನು ಬಳಸಿದ್ದು, ನಿಜವಾಗಲೂ ನಾನು ಕಾಗೆ ಹಾರಿಸುವುದಾದರೆ ಇಷ್ಟೊತ್ತಿಗೆ 20 ಬಾರಿ ಮಂತ್ರಿ, 20 ಬಾರಿ ಶಾಸಕನಾಗುತ್ತಿದ್ದೆ. ನಾನು ತಲೆ ಹೊಡೆದು ಜೀವನ ನಡೆಸುತ್ತಿಲ್ಲ. ಇಷ್ಟು ವರ್ಷಗಳ ಕಾಲ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ಈಗಲೂ ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆಂದರೆ, ಅದಕ್ಕೆ ಕನ್ನಡಿಗರ ಆಶೀರ್ವಾದವೇ ಕಾರಣ ಹೊರತು ನೀವಲ್ಲ ಎಂದು ಜಗ್ಗೇಶ್ ಕಿಡಿಕಾರಿದ್ದಾರೆ.
ಚಿತ್ರರಂಗದ ಬಣ್ಣ ಮಾಸುತ್ತಿದೆ
ಇಲ್ಲಿಯವರೆಗೆ ನಾನು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬಂದಿದ್ದೇನೆ. ಬೇರೆ ಭಾಷೆ ಸಿನಿಮಾದ ಸೆಟ್ ಗೆ ನನ್ನ ಚಪ್ಪಲಿಯೂ ಸಹ ಹೋಗಲ್ಲ. ಅನ್ಯ ಭಾಷೆಯವರು ಕನ್ನಡ ಚಿತ್ರರಂಗವನ್ನ ಆಳುತ್ತಿದ್ದಾರೆ. ಹೊರಗಡೆಯಿಂದ ಬಂದವರು ಕನ್ನಡ ಚಿತ್ರೋದ್ಯಮದಲ್ಲಿ ಬೇಳೆಯನ್ನ ಬೇಯಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ಹದಗೆಡುತ್ತಿದೆ, ಯಾರು? ಸಹ ಇದರ ವಿರುದ್ಧ ಧ್ವನಿಯೆತ್ತುತ್ತಿಲ್ಲ.
ನಾನು ಯಾರಿಗೂ ಬಕೆಟ್ ಹಿಡಿದು ಜೀವನವನ್ನ ಸಾಗಿಸುತ್ತಿಲ್ಲ. ಅಂದು ಸ್ವಾಭಿಮಾನಿಯಾಗಿ ಬದುಕಿದ್ದೇನೆ ಇನ್ಮುಂದೆ ಸಹ ಸ್ವಾಭಿಮಾನಿಯಾಗಿಯೇ ಬದುಕುತ್ತೇನೆ. ರಾಜ್ ಕುಮಾರ್, ಅಂಬರೀಷ್, ವಿಷ್ಣುವರ್ಧನ್ ಕಳೆದುಕೊಂಡ ಮೇಲೆ ಚಿತ್ರರಂಗದ ಬಣ್ಣ ಮಾಸುತ್ತಿದೆ. ನಾವು ಸತ್ತ ಮೇಲೆ ತಿಥಿಯನ್ನು ಮಾಡಿ ಖುಷಿ ಪಡಿ, ನನಗೆ ಬಹಳ ನೋವು ಕೊಟ್ಟು, ಬೇಸರಕ್ಕೆ ಒಳಪಡಿಸಿದ್ದೀರಾ ಎಂದು ಜಗ್ಗಣ್ಣ ಬಹಳ ಬೇಸರದಿಂದ ಮಾತನಾಡಿದ್ದಾರೆ.
ಸ್ನೇಹ, ಹರಟೆ, ಕಾರ್ಯಕ್ರಮ ಎಲ್ಲದಕ್ಕೂ ಬ್ರೇಕ್
ಮುಂದಿನ ದಿನಗಳಲ್ಲಿ ನನ್ನ ಸಹದ್ಯೋಗಿ ಗಳ ಜೊತೆ ಸ್ನೇಹ, ಹರಟೆ, ಕಾರ್ಯಕ್ರಮ ಎಲ್ಲದಕ್ಕೂ ಬ್ರೇಕ್ ಹಾಕಬೇಕೆಂದು ನಿರ್ಧರಿಸಿದ್ದೇನೆ. ನನ್ನ ಜೀವನ ಸಿನಿಮಾಕ್ಕಾಗಿ ಮತ್ತು ಖಾಸಗಿ ವಾಹಿನಿಗಳಲ್ಲಿ ಬರುವ ಶೋಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ದೊಡ್ಡವರು ಬದುಕಿದ್ದಾಗಲೇ ಅವಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯವಾಗಿದೆ. ಇದು ನವರಸ ನಾಯಕನ ಮೊದಲ ಟ್ವೀಟ್ ಆಗಿತ್ತು.
ಬರಹ: ಶ್ರೀ ಹರ್ಷ