ಸಾಫ್ಟ್ ವೇರ್ ಎಂಜಿನೀಯರ್ ಮನೆಯಲ್ಲಿ ಕೆಲಸದ ಯುವತಿಯ ನಿಗೂಢ ಸಾವು

ಬೆಂಗಳೂರು:  ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರ ಫ್ಲ್ಯಾಟ್‌ನಲ್ಲಿ ಮನೆಗೆಲಸದ ಯುವತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ  ನಡೆದಿದೆ. ಜಕ್ಕಸಂದ್ರ ನಿವಾಸಿ ಕವಿತಾ (18) ಮೃತ ದುರ್ದೈವಿ. ಫ್ಲ್ಯಾಟ್‌ನ ಸ್ನಾನದ ಕೋಣೆಯಲ್ಲಿ ಬೆಳಗ್ಗೆ 9.30ರ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆ ಮೃತದೇಹ ಪತ್ತೆಯಾಗಿದೆ.

ಮನೆ ಮಾಲೀಕರು ಬೆಳಗ್ಗಿನ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕವಿತಾ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಖಾಸಗಿ ಕಂಪನಿ ಉದ್ಯೋಗಿ ವಿವೇಕ್ ಕೃಷ್ಣಣ್ ಅವರು ಬೆಳ್ಳಂದೂರು ಎಂಬೆಸ್ಸಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದಾರೆ. ಎಂಟು ತಿಂಗಳಿಂದ ಅವರ ಮನೆಯಲ್ಲಿ ಕವಿತಾ ಕೆಲಸ ಮಾಡುತ್ತಿದ್ದಳು. ಆ ಫ್ಲ್ಯಾಟ್‌ನಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಆಕೆ ನೆಲೆಸಿದ್ದಳು. ತಕ್ಷಣವೇ ಬೆಳ್ಳಂದೂರು ಠಾಣೆ ಪೊಲೀಸರಿಗೆ ವಿವೇಕ್‌ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೌಖಿಕವಾಗಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಎಫ್‌ಎಸ್‌ಎಲ್‌ ವರದಿ ಬಳಿಕ ಸಾವಿನ ಬಗ್ಗೆ ಖಚಿತ ಕಾರಣ ಗೊತ್ತಾಗಲಿದೆ. ಈ ಬಗ್ಗೆ ಆತ್ಮಹತ್ಯೆ ಆರೋಪದಡಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 

By: Yashaswini Srinivas