ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ಸಾಂಸ್ಥಿಕರಿಸಿ ಹೋದವರಿಂದ ಇನ್ನೇನು‌‌ ನಿರೀಕ್ಷಿಸಲು ಸಾಧ್ಯ?

ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ಸಾಂಸ್ಥಿಕರಿಸಿ ಹೋದವರಿಂದ ಇನ್ನೇನು‌‌ ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದೆ.

ಕೊಟ್ಟ ಕುದುರೆ ಏರಲರಿಯದೇ ಮತ್ತೊಂದು ಕುದುರೆ ಬಯಸುವವ ವೀರನೂ ಅಲ್ಲ, ಧೀರನೂ ಅಲ್ಲ. ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಗಾಗಿ ಏನು ಮಾಡದ ಡಿಕೆ ಶಿವಕುಮಾರ್ ಅವರು ಈಗ ಸುಳ್ಳಿನಜಾತ್ರೆ ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದೆ. 

ಮೇಕೆದಾಟುಗಾಗಿ ಪಾದಯಾತ್ರೆ ನಡೆಸಲು ಮುಂದಾಗಿರುವ ಕಾಂಗ್ರೆಸ್‌ ಮೊದಲು ಸತ್ಯ ಏನೆಂಬುದನ್ನು ತಿಳಿಸಲಿ. ಡಿಪಿಆರ್ ಸಿದ್ಧಪಡಿಸುವಲ್ಲಿ ಕಾಂಗ್ರೆಸ್ ಪಾತ್ರ ಏನೂ ಇರಲಿಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ, ನಿಜವಲ್ಲವೇ? ಡಿಕೆಶಿಯವರೇ, ನೀವು ಅಧಿಕಾರದಲ್ಲಿದ್ದಾಗ ಕೇವಲ ಪರ್ಸಂಟೇಜ್ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡಿದ್ದೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ ಹೇಗೆ? ಟೀಕೆ ಹಾಗೂ ಅಭಿಪ್ರಾಯಗಳೇ ಮನುಷ್ಯನ ವ್ಯಕ್ತಿತ್ವ ರೂಪಿಸುವುದು ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷರು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದೆ.

                                                                                           ಚೈತ್ರಾ ಹೀರೆಮಠ