
ಧರ್ಮ ನಿಂದನೆ ಆರೋಪ: ಪಾಕ್ ಪ್ರೊಫೆಸರಗೆ ಗಲ್ಲು.
ಇಸ್ಲಾಮಾಬಾದ್:- ಧರ್ಮನಿಂದನೆ ಆರೋಪಕ್ಕೆ ಒಳಗಾಗಿದ್ದ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರಿಗೆ ಮರಣ ದಂಡನೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯ ತೀರ್ಪು ನೀಡಿದೆ. ದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ಉದಾರವಾದಿ ಚಟುವಟಿಕೆಗಳನ್ನು ದಮನಿಸಲು ಧರ್ಮನಿಂದನೆ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಟೀಕಾಕಾರರು ಈ ತೀರ್ಪನ್ನು ವಿಶ್ಲೇಷಿಸಿದ್ದಾರೆ.
ಬಹಾವುದ್ದೀನ್ ಝಕಾರಿಯಾ ವಿಶ್ವವಿದ್ಯಾನಿಲಯದ ಉಪನ್ಯಾಸಕ ಜುನೈದ್ ಹಫೀಝ್(33) ಅವರನ್ನು 2013ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಪ್ರವಾದಿ ಮುಹಮ್ಮದ್(ಸ.) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಹೇಳಿಕೆ ಪೋಸ್ಟ್ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
ಸಂಪ್ರದಾಯವಾಗಿ ಮುಸ್ಲಿಮರ ಬಾಹುಳ್ಯವಿರುವ ಪಾಕಿಸ್ತಾನದಲ್ಲಿ ಧರ್ಮನಿಂದನೆ ತೀರಾ ಭಾವನಾತ್ಮಕ ವಿಚಾರವಾಗಿದ್ದು, ಇದಕ್ಕೆ ಮರಣ ದಂಡನೆ ವಿಧಿಸಲಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಆರೋಪ ಸಾಬೀತಾಗದಿದ್ದರೂ, ಗುಂಪು ಹತ್ಯೆ ಮತ್ತು ಧರ್ಮಸಂರಕ್ಷಕರಿಂದ ಆರೋಪಿಗಳ ಹತ್ಯೆಗಳು ನಡೆಯುತ್ತವೆ.
ಹಫೀಝ್ ಶಿಕ್ಷೆಯನ್ನು ಕೇಂದ್ರ ನಗರವಾದ ಮುಲ್ತಾನ್‌ನಲ್ಲಿ ಘೋಷಿಸಲಾಗಿದೆ. ಆರು ವರ್ಷಗಳ ಹಿಂದೆ ಉಪನ್ಯಾಸಕನನ್ನು ಇಲ್ಲಿ ಬಂಧಿಸಲಾಗಿತ್ತು. ಈ ತೀರ್ಪನ್ನು ಅತ್ಯಂತ ದುರದೃಷ್ಟಕರ ಘಟನೆ ಎಂದು ಆರೋಪಿ ಪರ ವಕೀಲ ಅಸಾದ್ ಜಮಾಲ್ ಹೇಳಿದ್ದಾರೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಧಾರ್ಮಿಕ ಪಕ್ಷವೊಂದರ ವಿದ್ಯಾರ್ಥಿ ಹೋರಾಟಗಾರರು ತಮ್ಮ ವಿರುದ್ಧ ವೃಥಾ ಆರೋಪ ಮಾಡಿದ್ದು, ನನ್ನ ನೇಮಕಾತಿಯನ್ನೇ ಈ ಮೊದಲು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸಿದ್ದವು ಎಂದು ಅವರು ತಿಳಿಸಿದ್ದಾರೆ.