ಹಳೆ ನಾಣ್ಯ ಮಾರಲು ಹೋಗಿ 1 ಲಕ್ಷ ಪಂಗನಾಮ ಹಾಕಿಸಿಕೊಂಡ
ಶಿವಮೊಗ್ಗ: ಹಳೆಯ ಕಾಲದ ನಾಣ್ಯಗಳನ್ನು ಮಾರಾಟ ಮಾಡಲು ಯತ್ನಿಸಿದ ತಾಲ್ಲೂಕಿನ ಕೊರನಕೋಟೆ ಗ್ರಾಮದ ಮಂಜುನಾಥ 1ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮಂಜುನಾಥ ಅವರು ನಾಣ್ಯಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದಾರೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ವಿಲಿಯಂ ಕನ್ನಿಂಗ್ ಎಂದು ಪರಿಚಯಿಸಿಕೊಂಡು ‘ನಾನು ಬೆಂಗಳೂರಿನಲ್ಲಿ ವಸ್ತು ಸಂಗ್ರಹಾಲಯ ಮಾಡುವ ಇಚ್ಛೆ ಹೊಂದಿದ್ದು, ನಿಮ್ಮಲ್ಲಿದ್ದ ನಾಣ್ಯಗಳನ್ನು ಕೊಳ್ಳಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾನೆ.
ಇಬ್ಬರ ನಡುವೆ ಮಾತುಕತೆಯಾಗಿ 5.40 ಲಕ್ಷ ರೂ. ಗಳಿಗೆ ವ್ಯವಹಾರ ಕುದುರಿದೆ. ಸಂಪೂರ್ಣ ಹಣ ಕೊಟ್ಟರಷ್ಟೇ ನಾಣ್ಯಗಳ ಹಸ್ತಾಂತರ ಮಾಡುವುದಾಗಿ ಮಂಜುನಾಥ ಅವರು ಷರತ್ತು ವಿಧಿಸಿದ್ದರು. ಕೆಲ ದಿನಗಳಲ್ಲಿ ಮಂಜುನಾಥ್ ಅವರಿಗೆ ‘ಬ್ಯಾಂಕ್ ಆಫ್ ಅಮೆರಿಕಾ’ ಎಂಬ ಹೆಸರಿನಲ್ಲಿ ಇ–ಮೇಲ್ ಬಂದಿದ್ದು, ಬ್ಯಾಂಕ್ ಶುಲ್ಕ ಪಾವತಿಸಿದರೆ ಕೆಲ ದಿನಗಳಲ್ಲಿ ಹಣ ವರ್ಗಾವಣೆಯಾಗಿ ಸಂಪೂರ್ಣ ಹಣ ನಿಮ್ಮ ಕೈ ಸೇರಲಿದೆ’ ಎಂದು ಹೇಳಿತ್ತು. ಇದನ್ನು ನಂಬಿದ ಮಂಜುನಾಥ ಅವರು ಬ್ಯಾಂಕ್ ತಿಳಿಸಿದ ಪೇಟಿಎಂ ನಂಬರ್‌ಗೆ 30 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಒಂದಾದ ಮೇಲೆ ಮತ್ತೊಂದು ಶುಲ್ಕ ಎಂದು ಕಥೆ ಕಟ್ಟಿದ ಬ್ಯಾಂಕ್ 1 ಲಕ್ಷ ರೂ. ವರೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದೆ.
60 ಸಾವಿರ ರೂ. ಹಣ ಕಟ್ಟಿದರೆ ಕ್ಷಣ ಮಾತ್ರದಲ್ಲಿ ನಿಮಗೆ ಕೊಡಬೇಕಾದ ಸಂಪೂರ್ಣ ಹಣ ನಿಮ್ಮ ಅಕೌಂಟ್‌ಗೆ ಬೀಳಲಿದೆ. ಇಲ್ಲದಿದ್ದರೆ ನಿಮ್ಮ ವ್ಯವಹಾರ ರದ್ದಾಗುವ ಅಪಾಯವಿದೆ. ಅಷ್ಟೇ ಅಲ್ಲದೆ ಆರ್‌ಬಿಐ ಕಾನೂನು ಪ್ರಕಾರ ನಿಮ್ಮನ್ನು ಜೈಲಿಗೆ ಕಳುಹಿಸುತ್ತಾರೆ’ ಎಂದು ಸಂದೇಶ ಬಂದಿದೆ. ಆಗ ಅನುಮಾನ ಬಂದು ಬ್ಯಾಂಕ್ ಬಗ್ಗೆ ವಿಚಾರಿಸಿದಾಗ ನಕಲಿ ಎಂದು ಗೊತ್ತಾಗಿದೆ. ಈ ಕುರಿತು ಮಂಜುನಾಥ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.