ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 80 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ತೀರ್ಮಾನಿಸಲಾಗಿದೆ. 23 ಎಕರೆ ಜಾಗದಲ್ಲಿ ಥೀಮ್ ಪಾರ್ಕ್ ಅನ್ನು ಸಹ ಸರ್ಕಾರ ನಿರ್ಮಾಣ ಮಾಡಲಿದೆ.
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ
ಸಭೆಯನ್ನು ಬುಧವಾರ ನಡೆಸಿದರು. ಸಭೆಯ ಬಳಿಕ ಮಾತನಾಡಿ, " ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಜಾಗ ನಿಗದಿ ಮಾಡಲಾಗಿದೆ" ಎಂದರು.
80 ಅಡಿ ಎತ್ತರದ ಪ್ರತಿಮೆಯ ವಿನ್ಯಾಸ, ಪರಿಕಲ್ಪನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 23 ಎಕರೆ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಕೂಡಾ ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಕೆಂಪೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ಅಭಿವೃದ್ಧಿಪಡಿಸಿದ್ದ 46 ತಾಣಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಜೊತೆಗೆ ಪುನರುಜ್ಜೀವನ ಮಾಡಲು ತಜ್ಞರ ಜೊತೆ ವಿವರವಾಗಿ ಚರ್ಚಿಸಲಾಗಿದೆ. ನಾಡಿಗೆ ಕೆಂಪೇಗೌಡರ ಕೊಡುಗೆ ತಿಳಿಯುವಂತೆ ಮಾಡುವುದು ಸರ್ಕಾರದ ಆಶಯ ಎಂದರು.