ರಾಮನಗರ ಜಿಲ್ಲೆಯ ಹೆಸರು ಬದಲಿಸುವುದಿಲ್ಲ ; ಸಿಎಂ ಬಿಎಸ್ ವೈ. ...

ಬೆಂಗಳೂರು: ರಾಮನಗರ ಜಿಲ್ಲೆಯನ್ನ ಬೆಂಗಳೂರಿಗೆ ಸೇರಿಸಿಕೊಂಡು, ಅಭಿವೃದ್ಧಿ ಹಾಗೂ ಕೈಗಾರಿಕ ಉದ್ಯಮ ಅಭಿವೃದ್ಧಿಗಾಗಿ 'ನವಬೆಂಗಳೂರು' ಎಂದು ಹೆಸರಿಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹರಡಿದ ವದಂತಿಯು ಕೆಲವು ದಿನಗಳಿಂದ ಚರ್ಚೆಗೊಳಗಾಗಿದ್ದು, ಇದೀಗ ಈ ವಿಚಾರಕ್ಕೆ ತೆರೆ ಬಿದ್ದಿದೆ.  ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ, 'ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. 

ರಾಮನಗರ ಮರುನಾಮಕರಣ ವಿಷಯವಾಗಿ ಹೇಳಿಕೆ ನೀಡಿದ ಸಿಎಂ, ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರ್ಕಾರದ ಮುಂದೆ ಈ ತರಹದ ಯಾವುದೇ ಯೋಚನೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ. ಬಹುಶಃ ಆ ಎರಡು ಪಕ್ಷಗಳ ನಾಯಕರುಗಳು ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್, ಕಾಂಗ್ರೆಸ್​​ ನಾಯಕರ ಭಕ್ತಿಗೆ ನನ್ನ ಸ್ವಾಗತ ಸರ್ಕಾರದ ಮುಂದೆ ಯಾವುದೇ ಆ ತರಹದ ವಿಷಯವಾಗಲಿ ಅಥವಾ ಕಾರ್ಯಸೂಚಿಯಾಗಲಿ ಇಲ್ಲವೆಂದು ಸ್ಪಷ್ಟಪಡಿಸುತ್ತೇನೆ.

ಶ್ರೀರಾಮನ ಬಗ್ಗೆ ನಮಗೆ ಇರುವ ಭಕ್ತಿಯಾಗಲಿ ಅಥವಾ ಅಭಿಮಾನವಾಗಲಿ ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ನನಗೆ ಆಶ್ಚರ್ಯವೆನೆಂದರೆ ಕಾಂಗ್ರೆಸ್‍ನವರಿಗಾಗಲಿ, ಜೆಡಿಎಸ್ ನವರಿಗಾಗಲಿ ರಾಮನ ಬಗ್ಗೆ ಭಕ್ತಿ ಹುಟ್ಟಿದ್ದು. ಅವರ ಭಕ್ತಿ ನಿಜವಾಗಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲದ ವಿಷಯದ ಬಗ್ಗೆ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.