ರಣಜಿ: ಕರ್ನಾಟಕವನ್ನು ಕಾಡಿದ ಪೂಜಾರಾ - ಜಾಕ್ಸನ್ ಜೊತೆಯಾಟ...!

ರಣಜಿ: ಕರ್ನಾಟಕವನ್ನು ಕಾಡಿದ ಪೂಜಾರ - ಜಾಕ್ಸನ್ ಜೊತೆಯಾಟ....!


ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಐದನೇ ಸುತ್ತಿನ ರಣಜಿ ಪಂದ್ಯದಲ್ಲಿ ಮೂರನೇ ವಿಕೆಟಿಗೆ ಜೊತೆಗೂಡಿದ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಕ್ರೀಸ್ ಗೆ ಅಂಟಿಕೊಂಡು ಮುರಿಯದ ಮೂರನೇ ವಿಕೆಟ್ ಗೆ 263 ರನ್ ಜೊತೆಯಾಟ ನೀಡಿ ರಾಜ್ಯದ ಬೌಲರ್ ಗಳನ್ನು ಕಾಡಿದರು.


ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ 32 ರನ್ನಿಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆರಂಭಿಕರಾದ ಹಾರ್ವಿಕ್ ದೇಸಾಯಿ 13, ಸ್ನೇಲ್ ಪಾಟೀಲ್ 16, ಸುಚಿತ್ ಮೋಡಿಗೆ ಸಿಲುಕಿ ಬೇಗನೆ ಪೆವಿಲಿಯನ್ ಸೇರಿದರು.

ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೆತೇಶ್ವರ್ ಪೂಜಾರ ಅಜೇಯ ಶತಕ ಹಾಗೂ ಶೆಲ್ಡನ್ ಜಾಕ್ಸನ್ ಅವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ವಿರುದ್ಧ ಸೌರಾಷ್ಟ್ರ ಕೇವಲ ಎರಡು ವಿಕೆಟ್ ಗೆ 296 ರನ್ ಗಳಿಸಿದೆ. ಪೂಜಾರ 162, ಮತ್ತು ಜಾಕ್ಸನ್ 99 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪೂಜಾರ ಬಾರಿಸಿದ 50ನೇ ಶತಕ ಎಂಬುದು ವಿಶೇಷ. 238 ಎಸೆತಗಳನ್ನು ಎದುರಿಸಿದ ಪೂಜಾರ 17 ಬೌಂಡರಿ,1 ಸಿಕ್ಸರ್ ಒಳಗೊಂಡ 162 ರನ್ ಗಳಿಸಿದ್ದು, ಭಾನುವಾರ ದ್ವಿಶತಕ ಬಾರಿಸುವ ಎಲ್ಲಾ ಸಾಧ್ಯತೆ ಇದೆ. 191 ಎಸೆತ ಎದುರಿಸಿರುವ ಜಾಕ್ಸನ್ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 99 ರನ್ ಗಳಿಸಿದ್ದಾರೆ. ದ್ವಿತೀಯ ದಿನ ಬಹಳ ಬೇಗ ಶತಕ ಸಂಭ್ರಮ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

            ಮೊದಲನೇ ದಿನದಂತ್ಯಕ್ಕೆ...
           ಸೌರಾಷ್ಟ್ರ-2 ವಿಕೆಟ್ ಗೆ 296( ಪೂಜಾರ 162,   ಜಾಕ್ಸನ್ 99)
            ಕರ್ನಾಟಕದ ಸೂಚಿತ್ ಗೆ 85 ಕ್ಕೆ 2.