ಇಂದು ಸುಗ್ಗಿ ಹಬ್ಬದ ಸಂಭ್ರಮ...ನಾಡಿನಾದ್ಯಂತ ಮನೆ ಮಾಡಿದ ಸಡಗರ..

ಇಂದು ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ. ಎಳ್ಳು - ಬೆಲ್ಲ ಹಂಚಿ ಸಂಭ್ರಮಪಡುವ ದಿನ. ಹಾಗಾದ್ರೆ ಸಂಕ್ರಾಂತಿ ಹಬ್ಬದ ವಿಶೇಷತೆ ಏನು..? ಯಾವೆಲ್ಲ ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುವುದರ ಮಾಹಿತಿ ಈ ಲೇಖನದಲ್ಲಿ.

ಪ್ರತಿ ವರ್ಷ ಜನೆವರಿ 14 ಅಥವಾ 15 ರಂದು ಸೂರ್ಯ ತನ್ನ ಚಲಿಸುವ ಪಥವನ್ನು ಬದಲಾಯಿಸುತ್ತಾನೆ. ಮೊದಲು ದಕ್ಷಿಣಾಯಣವಾಗಿ ಚಲಿಸುತ್ತಿದ್ದ ಸೂರ್ಯ ಸಂಕ್ರಮಣದ ನಂತರ ಉತ್ತರಾಯಣವಾಗಿ ಚಲಿಸುತ್ತಾನೆ. ಸೂರ್ಯ ತನ್ನ ಪಥ ಬದಲಾಯಿಸುವುದರಿಂದ ಚಳಿ ಕಡಿಮೆಯಾಗಿ ಹಗಲಿನ ಅವಧಿ ಜಾಸ್ತಿಯಾಗುತ್ತದೆ.

ಎಲ್ಲಿ ಹೇಗೆ ಆಚರಣೆ..? 
ಕರ್ನಾಟಕ , ತಮಿಳುನಾಡು ಹಾಗೂ ಆಂಧ್ರಪ್ರದೇಶ ದಲ್ಲಿ ಒಂದೇ ಸಮಯಕ್ಕೆ ಹಬ್ಬವನ್ನು ಆಚರಿಸಲಾಗುತ್ತದೆಯಾದರೂ ಆಚರಣೆ ಮಾಡುವ ವಿಧಾನದಲ್ಲಿ ಕೆಲವು ಬದಲಾವಣೆಗಳಿವೆ. ಕೆಲವಡೆ ಸಂಕ್ರಾಂತಿ ಎಂದು ಕರೆದರೆ ಇನ್ನು ಕೆಲವೆಡೆ ಇದೇ ಹಬ್ಬವನ್ನು ಪೊಂಗಲ್, ಭೋಗಿ ಎಂದು ಕರೆಯುತ್ತಾರೆ.

ರೈತರಿಗೆ ಸುಗ್ಗಿ ಕಾಲ ಈ ಸಂಕ್ರಾಂತಿ.....

ಇನ್ನು ವರ್ಷ ಪೂರ್ತಿ ಮೈಮುರಿದು ದುಡಿಯುವ ರೈತನ ಮುಖದಲ್ಲಿ ಮಂದಹಾಸ ಮೂಡುವ ಸಮಯವಿದು. ತಾನು ಬೆಳೆದ ಬೆಳೆಯ ಸುಗ್ಗಿಯನ್ನು ಕಂಡು ರೈತ ಖುಷಿ ಪಡುವ ದಿನವಾದ್ದರಿಂದ ಈ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯುತ್ತಾರೆ.ಇಂದು ರೈತರು ತಮ್ಮ ಜಾನುವಾರುಗಳಿಗೆ ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಎತ್ತುಗಳನ್ನು ಕಿಚ್ಚಿನಲ್ಲಿ ಹಾಯಿಸುವುದು ಈ ಹಬ್ಬದ ಇನ್ನೊಂದು ವಿಶೇಷತೆ.

ಎಳ್ಳು - ಬೆಲ್ಲ ಹಂಚುವ ಹಬ್ಬ...
ಇನ್ನು ಇಂದು ಎಲ್ಲರು  ಬೆಳಿಗ್ಗೆ ಎಳ್ಳಿನಿಂದ ಸ್ನಾನ ಮಾಡಿ ನಂತರ ಎಳ್ಳು ಬೆಲ್ಲವನ್ನು ತಿನ್ನುತ್ತಾರೆ. ನಂತರ ತಮ್ಮ ಬಂಧು ಮಿತ್ರರೆಲ್ಲರಿಗೂ ಎಳ್ಳು - ಬೆಲ್ಲವನ್ನು ಹಂಚುತ್ತಾ, ಎಳ್ಳು - ಬೆಲ್ಲ ತಿಂದು ಒಳ್ಳೇ ಮಾತಾಡಿ ಎಂದು ಹೇಳುತ್ತಾರೆ.