ಬೆಂಗಳೂರಿಗೆ ಕಾಲಿಟ್ಟ ಕೊರೊನಾ : ವೈರಸ್ ಸೋಂಕಿತ ವ್ಯಕ್ತಿ ಬೆಂಗಳೂರಲ್ಲಿ ಪತ್ತೆ
ಮಾರಣಾಂತಿಕ ವೈರಸ್ ಸೋಂಕಿತ ತೆಲಂಗಾಣ ಮೂಲದ ಟೆಕ್ಕಿ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಎರಡು ವಾರಗಳ ಬಳಿಕ ಈ ಸೋಂಕು ತಗುಲಿದೆ ಎನ್ನಲಾಗಿದ್ದ ಕೇರಳದ ಮೂವರು ರೋಗಿಗಳು ಚೇತರಿಸಿಕೊಂಡಿದ್ದು, ಈಗ ಮತ್ತೆ ಮೂರು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ದೆಹಲಿಯಲ್ಲಿ ಒಂದು, ತೆಲಂಗಾಣದಲ್ಲಿ ಒಂದು ಹಾಗೂ ರಾಜಸ್ಥಾನದಲ್ಲಿ ಇಟಲಿಯ ಪ್ರವಾಸಿಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ದೃಢಪಟ್ಟಿರುವ ವ್ಯಕ್ತಿ ಇಟಲಿಯಿಂದ ವಾಪಸಾಗಿದ್ದರೆ. ಮತ್ತೋರ್ವ ವ್ಯಕ್ತಿ ತೆಲಂಗಾಣದವರಾಗಿದ್ದು, ಇತ್ತೀಚೆಗೆ ದುಬೈನಿಂದ ಬೆಂಗಳೂರಿಗೆ ಹಿಂದಿರುಗಿದ್ದರು.
ವೈರಸ್ ದೃಢಪಟ್ಟಿರುವ ತೆಲಂಗಾಣ ವ್ಯಕ್ತಿ 24 ವರ್ಷದ ಟೆಕ್ಕಿಯಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಟೆಕ್ಕಿ ಬೆಂಗಳೂರಿನಿಂದ ಹೈದರಾಬಾದ್ ಗೆ ಬಸ್ ನಲ್ಲಿ ಪ್ರಯಾಣಿಸಿದ್ದರಿಂದ 80 ಮಂದಿಯನ್ನು ತಪಾಸಣೆಗೆ ಒಳಪಡಿಸುತ್ತಿರುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ.