
'ಆನೆ ಬಲ' ಚಿತ್ರದಲ್ಲಿ ಮಂಡ್ಯದ ರಾಗಿ ಮುದ್ದೆ: ಫೆ.28ಕ್ಕೆ ಬಿಡುಗಡೆ..!
ನವ ನಿರ್ದೇಶಕ, ನಟ, ನಟಿ, ನಿರ್ಮಾಪಕ ಹೀಗೆ ಎಲ್ಲರೂ ಹೊಸಬರೇ ಸೇರಿ ಮಾಡಿರುವ ಹೊಸದೊಂದು ಪ್ರಯತ್ನವೇ "ಆನೆ ಬಲ" ಎಂಬ ದೇಶಿ ಸೊಗಡಿನ ಸಿನಿಮಾ. ಈ ಸಿನಿಮಾದಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ಬದುಕು ಹಾಗೂ ಅಲ್ಲಿನ ರಾಗಿಮುದ್ದೆ ಆಹಾರ ಪದ್ಧತಿಗೆ ವಿಶೇಷ ಒತ್ತು ಕೊಟ್ಟು ಬಿಂಬಿಸಲಾಗಿದೆ. ಯೋಗರಾಜ್ ಭಟ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ ಹೊಂದಿರುವ 'ರಾಗಿ ಮುದ್ದೆ' ಹಾಡು ಈಗಾಗಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಇನ್ನು ಈ ಚಿತ್ರದ ಶೂಟಿಂಗ್ ಸಂಪೂರ್ಣ ಪೂರ್ಣಗೊಂಡಿದ್ದು, ಫೆಬ್ರವರಿ 28ಕ್ಕೆ "ಆನೆ ಬಲ" ತೆರೆ ಕಾಣಲಿದೆ.
ನಿರ್ದೇಶಕ ಸೂನಗಹಳ್ಳಿ ರಾಜು ಇದೇ ಮೊಟ್ಟ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕಿದ್ದು, ಮಂಡ್ಯ ಜಿಲ್ಲೆಯ ಗ್ರಾಮಗಳ ನೈಜ ಬದುಕು, ಸೊಬಗು, ಸೌಂದರ್ಯ, ಭಾಷೆಯ ಸೊಗಸು, ಇವೆಲ್ಲವನ್ನು ಯಥಾವತ್ತಾಗಿ "ಆನೆ ಬಲ" ಚಿತ್ರದ ಮೂಲಕ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.
*ನಿರ್ದೇಶಕರಾದ ಸಿದ್ದಲಿಂಗಯ್ಯ, ಮಣಿರತ್ನಂ ಸಿನಿಮಾಗಳಿಂದ ಪ್ರಭಾವಿತ: ಆನೆ ಬಲ ನಿರ್ದೇಶಕ ರಾಜು ಸೂಗನಹಳ್ಳಿ*
ಸುಮಾರು 15ವರ್ಷಗಳಿಂದ ಹಲವಾರು ನಿರ್ದೇಶಕರ ಜೊತೆ ಕೆಲಸ ಮಾಡಿ, ಇದೀಗ ಅವರ ಕನಸಿನ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ರಾಜು ಅವರು ಸಿನಿಮಾ ರಂಗದಲ್ಲಿನ ತಮ್ಮ 15ವರ್ಷಗಳ ಕಷ್ಟಕರ ಜರ್ನಿಯಲ್ಲಿ ಪಡೆದ ಅನುಭವ,
ಕೆ.ಶಿವರಾಮ ಕಾರಂತರಂತಹ ಸಾಹಿತ್ಯಗಳನ್ನು ಓದಿ ಪಡೆದ ಜ್ಞಾನ, ನಿರ್ದೇಶಕ ಸಿದ್ದಲಿಂಗಯ್ಯನವರ 'ಭೂತಯ್ಯನ ಮಗ ಅಯ್ಯು', 'ಬಂಗಾರದ ಮನುಷ್ಯ' ಮುಂತಾದ ಸಿನಿಮಾಗಳು, ನಿರ್ದೇಶಕ ಮಣಿರತ್ನಂರವರು ಸಿನಿಮಾಗಳು, ಹೀಗೆ ಇವೆಲ್ಲದರ ಪ್ರಭಾವದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಯಿತು ಎಂದು ಆನೆಬಲ ಕುರಿತು ನಡೆದ ಸಂದರ್ಶನದಲ್ಲಿ ಹಂಚಿಕೊಂಡರು.
*'ಆನೆ ಬಲ'ಕ್ಕೆ ನವ ನಾಯಕ.. ನವ ನಾಯಕಿ...!*
ಆನೆ ಬಲ ಚಿತ್ರಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕರಾದ ಈಶ್ವರಿ ಕುಮಾರ್ ಅವರ ಪುತ್ರ ಸಾಗರ್ ನಾಯಕರಾಗಿ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ನವ ನಾಯಕನಟಿಯಾಗಿ ರಾಮದುರ್ಗದ ರಕ್ಷಿತಾ ಅಭಿನಯಿಸಿದ್ದಾರೆ. ಶೂಟಿಂಗ್ಗೂ ಮುನ್ನ ಇವರಿಬ್ಬರನ್ನು ಪಾತ್ರಗಳಿಗೆ ಒಗ್ಗಿಸಲು ಕೆಲ ಸಮಯ ಬೇಕಾಯಿತು ಎಂದು ನಿರ್ದೇಶಕರು ಇಲ್ಲಿ ಹೇಳಿದರು.
*ಹೊಸಬರ ಸಿನಿಮಾ ಪ್ರೋತ್ಸಾಹಿಸಿ: 'ಆನೆ ಬಲ' ನಿರ್ಮಾಪಕ ವೇಣುಗೋಪಾಲ್....!*
ನಿರ್ಮಾಪಕರಾದ ಎ.ವಿ.ವೇಣುಗೋಪಾಲ್ ಮೂಲತಃ ರೈತರಾಗಿದ್ದು, ರೈತ ಜೀವನ, ಹಳ್ಳಿ ಬದುಕು ಇವನ್ನೆಲ್ಲಾ ಒಳಗೊಂಡಿರುವ 'ಆನೆ ಬಲ' ಚಿತ್ರಕ್ಕೆ ನಿರ್ಮಾಣ ಮಾಡಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಹಾಗೆ ನಿರ್ಮಾಪಕರು, 'ಈ ಚಿತ್ರದ ತುಣುಕುಗಳನ್ನು ವೀಕ್ಷಕನಾಗಿ ನೋಡಿದ್ದೇನೆ, ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಸಿನಿಮಾದಿಂದ ತಾವು ಪ್ರಭಾವಿತರಾಗಿದ್ದ ಬಗ್ಗೆ ತಿಳಿಸಿದರು. ಇದೇ ವೇಳೆ ಸಿನಿಮಾ ಮಾಡಿರುವುದರ ಬಗ್ಗೆ ತಮಗೆ ತೃಪ್ತಿ ಇದೆ. ಆದರೆ ಇದೀಗ ಬಿಡುಗಡೆ ವೇಳೆ ಸಿನಿಮಾ ಯಾಕಾದರೂ ಮಾಡಿದ್ದೇನೆ ಎಂಬ ಭಾವನೆ ಬಂದಿದೆ ಎಂದರು. ಕಾರಣ,
ದೊಡ್ಡ ಸ್ಟಾರ್ ಗಳ ಸಿನಿಮಾವನ್ನು ಎಲ್ಲರೂ ಹೋಗಿ ನೋಡುತ್ತಾರೆ, ಅವರ ಸಿನಿಮಾಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ, ಆದರೆ ಹೊಸಬರ ಸಿನಿಮಾ, ಸಂದೇಶ ಪೂರ್ವಕ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುವುದು ಕಡಿಮೆಯಾಗಿದೆ. ಇದರಿಂದಾಗಿ ಸಿನಿಮಾವನ್ನು ಜನರಿಗೆ ತಲುಪಿಸುವುದು ಕಷ್ಟ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
*ಪೂರ್ಣರವರ ತಿನ್ಬೇಡಕಮ್ಮಿ ಬಳಿಕ, ಆನೆ ಬಲದಲ್ಲಿ ಬರ್ತಿವೆ 'ರಾಗಿ ಮುದ್ದೆ' ಹಾಗೂ 'ಮಳವಳ್ಳಿ ಜಾತ್ರೆ' ಹಾಡುಗಳು....!*
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರು ಈಗಾಗಲೇ ಲೂಸಿಯಾ ಸಿನಿಮಾದಲ್ಲಿ 'ತಿನ್ಬೇಡಕಮ್ಮಿ' ಎಂಬ ಮಂಡ್ಯ ಟಚ್ ಇರುವ ಹಾಡೊಂದನ್ನು ಮಾಡಿದ್ದರು. ಇದೀಗ 'ಆನೆಬಲ' ಚಿತ್ರಕ್ಕೆ ಸಹ ಮಂಡ್ಯದ 'ಮಳವಳ್ಳಿ ಜಾತ್ರೆ' ಹಾಗೂ 'ರಾಗಿ ಮುದ್ದೆ' ಮೇಲೆ ವಿಶೇಷ ಹಾಡುಗಳನ್ನು ಸಂಯೋಜಿಸಿದ್ದಾರೆ. 'ಮಳವಳ್ಳಿ ಜಾತ್ರೆ' ಹಾಡಿನ ಸಾಹಿತ್ಯ ಬರೆದವರು ಇದೇ ಚಿತ್ರದ ನಿರ್ದೇಶಕ ರಾಜು ಅವರೇ. ಈ ಸಂದರ್ಶನದ ವೇಳೆ ರಾಜುರವರು ಆ ಹಾಡಿನ ಸಾಲುಗಳನ್ನು ಸೊಗಸಾಗಿ ಹಾಡಿದ್ದಾರೆ. ಇನ್ನು ರಾಗಿ ಮುದ್ದೆ ಹಾಡಿನ ಸಾಹಿತ್ಯ ಬರೆದವರು ಯೋಗರಾಜ ಭಟ್ಟರು.