ಪೆರೋಲ್ ಪಡೆದು ಹೊರ ಬಂದಿದ್ದ ಅಜ್ಮಿರ ಬಾಂಬ್ ಬ್ಲಾಸ್ಟರ್ ನಾಪತ್ತೆ.!
ಮುಂಬೈ: ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಆರೋಪಿ ಡಾ.ಜಲೀಲ್ ಅನ್ಸಾರಿ ನಾಪತ್ತೆಯಾಗಿದ್ದಾನೆ.
ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮುಂಬೈನ ಮೊಮಿನ್‌ಪಾಡ ನಿವಾಸಿ ಡಾ.ಜಲೀಲ್ ಅನ್ಸಾರಿ ಪೆರೋಲ್ ಪಡೆದು ಅಜ್ಮೀರ್ ಜೈಲಿನಿಂದ ಮನೆಗೆ ಬಂದಿದ್ದನು. 21 ದಿನಗಳ ಪೆರೋಲ್ ಪಡೆದಿದ್ದ ಜಲೀಲ್ ಅನ್ಸಾರಿ ನಿತ್ಯ ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಗೆ ಹಾಜರಾಗುವ ಷರತ್ತಿನ ಮೇರೆಗೆ ಪೆರೋಲ್ ನೀಡಲಾಯಿತು.
ಆದರೆ, ಜನವರಿ 16 ರಂದು ಬೆಳಗ್ಗೆ ಐದು ಗಂಟೆಗೆ ಮನೆಯಿಂದ ಹೊರ ಹೋದ ಅನ್ಸಾರಿ ಇನ್ನೂ ಮನೆಗೆ ಬಂದಿಲ್ಲ ಎಂದು ಆತನ ಕುಟುಂಬಸ್ಥರು ಅಗ್ರಿಪಾಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈಗಾಗಲೆ ಮುಂಬೈ ಅಪರಾಧ ವಿಭಾಗ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಜಲೀಲ್ ಅನ್ಸಾರಿಗಾಗಿ ಶೋಧ ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಮುಂಬೈ ಮಹಾನಗರ ಪಾಲಿಕೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಜಲೀಲ್ ಅನ್ಸಾರಿ, ಬಾಬರಿ ಮಸೀದಿ ಧ್ವಂಸ ಘಟನೆ ನಂತರ, ತೊಂಬತ್ತರ ದಶಕದಲ್ಲಿ ಬಾಂಬ್ ತಯಾರಿಕೆ ಅಧ್ಯಯನಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದನು.
ಬಾಂಬ್ಗಳನ್ನು ತಯಾರಿಸುವಲ್ಲಿ ಪಾಂಡಿತ್ಯ ಪಡೆದ ಈತನು ನಂತರ ಅಜ್ಮೀರ್ ಸ್ಫೋಟಕ್ಕೆ ಬಾಂಬ್ ಸಿದ್ಧಪಡಿಸಿದ್ದನು. ಅಜ್ಮೀರ್ ಬ್ಲಾಸ್ಟ್ನಲ್ಲಿ ಭಾಗಿಯಾಗಿರುವುದು ಸ್ಪಷ್ಟವಾದ ನಂತರ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.