ಪಾಕಿಸ್ತಾನ ಕ್ಕೆ ಸೂಕ್ಷ್ಮ ಮಾಹಿತಿ ರವಾನೆ .....!!!

 ಕಾರವಾರ ಡಿಸೆಂಬರ್ 21: ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಕುರಿತಾದ 'ಸೂಕ್ಷ್ಮ ಮಾಹಿತಿಯನ್ನು' ರವಾನಿಸಿದ್ದಾರೆಂದು ಆರೋಪಿಸಿ ಇಲ್ಲಿನ ಐಎನ್ ಎಸ್ ಕದಂಬ ನೌಕಾನೆಲೆಯ ಇಬ್ಬರು ನಾವಿಕರು ಸೇರಿದಂತೆ ಒಟ್ಟು ಏಳು ಸಿಬ್ಬಂದಿಯನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

 

ಆಂಧ್ರಪ್ರದೇಶದ ಗುಪ್ತಚರ ವಿಭಾಗ, ಕೇಂದ್ರ ಗುಪ್ತಚರ ದಳ ಮತ್ತು ನೌಕಾ ಗುಪ್ತಚರ ಪಡೆಯು ಜಂಟಿಯಾಗಿ 'ಆಪರೇಷನ್ ಡಾಲ್ಫಿನ್ಸ್ ನೋಸ್' ನಡೆಸಿ, ಈ ಕೃತ್ಯದಲ್ಲಿ ತೊಡಗಿಕೊಂಡಿದ್ದ ಮುಂಬೈ, ವಿಶಾಖಪಟ್ಟಣಂ ಹಾಗೂ ಕಾರವಾರದ ನೌಕಾನೆಲೆಗಳ ಒಟ್ಟು ಎಂಟು ನೌಕಾ ಸಿಬ್ಬಂದಿ ಹಾಗೂ ಹವಾಲಾ ಆಪರೇಟರ್ ಗಳನ್ನು ಏಕಕಾಲದಲ್ಲಿ ಬಂಧಿಸಿದೆ. ವಿಶಾಖಪಟ್ಟಣಂನಿಂದ ಮೂವರು, ಮುಂಬೈನಿಂದ ಇಬ್ಬರು ಮತ್ತು ಕಾರವಾರ ನೌಕಾ ನೆಲೆಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 

ಮೂಲಗಳ ಪ್ರಕಾರ, ಕಾರವಾರದಲ್ಲಿ ಬಂಧಿತರಾದವರು ನೌಕಾನೆಲೆಯಲ್ಲಿ ನಾವಿಕರಾಗಿ 2017ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು. 2018ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಪಾಕಿಸ್ತಾನದೊಂದಿಗೆ ಬೇಹುಗಾರಿಕೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ. ತಮ್ಮ ನೌಕಾ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಅವರು, ನೌಕಾ ಹಡಗುಗಳ ಚಲನೆ, ಸ್ಥಳ, ಸಂಕೇತಗಳು ಮತ್ತು ಇತರ ರಹಸ್ಯ ವಿವರಗಳ ಬಗ್ಗೆ ಮಾಹಿತಿಯನ್ನು ಪಾಕ್ ಗುಪ್ತಚರರೊಂದಿಗೆ ಹಂಚಿಕೊಳ್ಳುತ್ತಿದ್ದರು. ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

 

ಬಂಧಿತ ವ್ಯಕ್ತಿಗಳ ಹೆಸರುಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಕಾರವಾರದಲ್ಲಿ ಬಂಧಿತರಾದವರಲ್ಲಿ ಒಬ್ಬ ನಾವಿಕ ರಾಜಸ್ಥಾನ ಮೂಲದವನು ಮತ್ತು ಇನ್ನೊಬ್ಬ ಒಡಿಶಾದವನು ಎನ್ನಲಾಗಿದೆ. ಪೊಲೀಸರು ಬಂಧಿತರಿಂದ ಮೊಬೈಲ್ ಫೋನ್ ಸೇರಿದಂತೆ ಇತರ ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ನಾವಿಕರು ಅವಿವಾಹಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಕರ್ತವ್ಯದ ನಂತರ ಪಾಕಿಸ್ತಾನಿ ಹುಡುಗಿಯರೊಂದಿಗೆ ಇವರು ಚಾಟಿಂಗ್ ನಲ್ಲಿ ತೊಡಗುತ್ತಿದ್ದರು ಎನ್ನಲಾಗಿದೆ.

 

 

ಸಿಐಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನೌಕಾಪಡೆಯ ವಿವರಗಳನ್ನು ಶತ್ರು ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವಲ್ಲಿ ಇತರ ನೆಲೆಗಳಲ್ಲಿ ಇನ್ನೂ ಕೆಲವು ನೌಕಾಪಡೆಯ ಸಿಬ್ಬಂದಿ ಭಾಗಿಯಾಗಿರಬಹುದು ಎಂದು ಪೊಲೀಸ್ ಮತ್ತು ಗುಪ್ತಚರ ಪಡೆ ಶಂಕಿಸಿದೆ. ತನಿಖೆ ಪ್ರಗತಿಯಲ್ಲಿದೆ.