ರಾಜಕೀಯ ಸನ್ಯಾಸತ್ವಕ್ಕೆ ಮೊರೆ ..!!? ʼರೇಣುಕಾಚಾರ್ಯʼ
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಶುಭಮೂರ್ತ ಒದಗಿಬಂದಿದ್ದು, ನೂತನ ಮಂತ್ರಿಯಾಗಿ 10 ಜನ ಶಾಸಕರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದು ತಾನು ಸಚಿವನಾಗುತ್ತೇನೆ ಎಂಬ ನಂಬಿಕೆಯಲ್ಲಿ ಇದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತ್ರ ಶಾಕ್ ನಲ್ಲಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿ ಹೋಗಿದ್ದರಿಂದ ತೀವ್ರ ಬೇಸರಗೊಂಡು ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡಿದ್ದಾರೆ.
ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಾನು ಪಕ್ಷದ ನಾಯಕರ ಬಳಿ ಭವಿಷ್ಯದಲ್ಲಿ ಎಂದಿಗೂ ಸಚಿವ ಸ್ಥಾನ ಕೇಳುವುದಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ರಾಜಕೀಯ ಅಂದರೆ ಕೆಲವೊಮ್ಮೆ ಸನ್ಯಾಸಿಯಾಗಿಯೂ ಇರಬೇಕಾಗುತ್ತದೆ. ಕ್ಷೇತ್ರದ ಜನರು ನನ್ನನ್ನು ಸಚಿವನಾಗಬೇಕು ಎಂದೇ ಆಯ್ಕೆ ಮಾಡಿಲ್ಲ. ನಾನು ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ" ಎಂದರು.
"ಸಿ.ಪಿ. ಯೋಗೇಶ್ವರ್ ಹಾಗೂ ನಾನು ಉತ್ತಮ ಸ್ನೇಹಿತರು. ಆದರೆ, ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗದಿರುವ ವಿಚಾರದಲ್ಲಿ ನನ್ನ ಹಾಗೂ ಸಿಎಂ ಬಿಎಸ್‌ವೈ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ" ಎಂದು ಹೇಳಿದರು.