'ಶುಕ್ರ' ನ ಮೇಲೆ ಕಾಲಿಡಲು ಭಾರತ ರೆಡಿ!
ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಗಗನನೌಕೆಗಳನ್ನು ಯಶಸ್ವಿಯಾಗಿ ಕಳುಹಿಸಿದ ನಂತರ ಭಾರತದ ಮುಂದಿನ ಯೋಜನೆ ಶುಕ್ರ ಗ್ರಹವಾಗಿದೆ. ನಮ್ಮ ಸೌರಮಂಡಲದ ಅತ್ಯಂತ ಬಿಸಿ ಗ್ರಹ ಎಂದೇ ಪರಿಗಣಿಸಲಾಗಿರುವ ಶುಕ್ರನ ಗರ್ಭದೊಳಗೆ ಅಡಗಿರುವ ರಹಸ್ಯವನ್ನು ಭೇದಿಸುವ ಹಾಗೂ ಆ ಗ್ರಹದ ವಾತಾವರಣವನ್ನು ಅಧ್ಯಯನ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ಕೆಲಸವನ್ನು ಇಸ್ರೋ ಸಂಸ್ಥೆಯು ಬಹಳ ವರ್ಷಗಳ ಹಿಂದೆಯೇ ಆರಂಭಿಸಿತ್ತು. ಬಾಹ್ಯಾಕಾಶ ಸಂಸ್ಥೆಯು ಇದೀಗ ಅದೇ ಶುಕ್ರನ ಕಕ್ಷೆಗೆ ಆರ್ಬಿಟರ್ ಕಳುಹಿಸಲು ಸಿದ್ಧವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
2024 ಡಿಸೆಂಬರ್ ತಿಂಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಆಲೋಚನೆಯನ್ನು ಇಸ್ರೋ ಮಾಡಿಕೊಂಡಿದೆ.
ಶುಕ್ರನ ಮೇಲ್ಮೈ ಪ್ರಕ್ರಿಯೆಗಳು, ಸಕ್ರಿಯ ಅಗ್ನಿಪರ್ವತ ಪ್ರದೇಶಗಳು ಮತ್ತು ಲಾವಾ ಹರಿವು ಕುರಿತು ತನಿಖೆ, ಗ್ರಹದ ಸುತ್ತ ಇರುವ ಸಲ್ಫ್ಯೂರಿಕ್ ಆಸಿಡ್ ಕ್ಲೌಡ್ ನ ರಹಸ್ಯವನ್ನು ಪತ್ತೆ ಮಾಡುವುದು, ಲಾವಾ ಸ್ಫೋಟ ಗ್ರಹದ ರಚನೆ ಅದರ ಪರಿಸರ ವಿವರ ಇತ್ಯಾದಿಯನ್ನು ಅಧ್ಯಯನ ಮಾಡುವುದೂ ಸಹ ಇಸ್ರೋದ ಶುಕ್ರ ಯೋಜನೆಯಲ್ಲಿ ಇರಲಿದೆ. ಅಲ್ಲದೇ ಈ ಗ್ರಹವನ್ನು ಸಲ್ಫ್ಯೂರಿಕ್ ಆಸಿಡ್ ಮೋಡಗಳು ಆವರಿಸಿರುವುದರಿಂದ ಇದು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ಸ್ವರೂಪದ್ದಾಗಿದೆ.
ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಯೋಜನೆಗೆ 2024 , ಡಿಸೆಂಬರ್ ಕಾಲವೇ ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಅವಧಿಯಲ್ಲಿ ಶುಕ್ರಗ್ರಹವು ಭೂಮಿಯ ಸಮೀಪ ಬರುತ್ತದೆ ಆ ಸಮಯದಲ್ಲಿ ಗಗನನೌಕೆಯನ್ನು ಹೆಚ್ಚು ಶಕ್ತಿಯ ಅಗತ್ಯ ಇಲ್ಲದೆ ಶುಕ್ರನ ಕಕ್ಷೆಗೆ ಸೇರಿಸಲು ಸಾಧ್ಯವಾಗುತ್ತದೆ ಎಂಬುದು ಇಸ್ರೋದ ಚಿಂತನೆ. ಮತ್ತೆ ಇಂಥ ಕಾಲಾವಧಿ ಸಿಗಲು 2031 ರವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ 2024ಕ್ಕೆ ಶುಕ್ರ ಯೋಜನೆ ಪೂರ್ಣಗೊಳಿಸುವ ಉದ್ದೇಶ ಇಸ್ರೋ ಸಂಸ್ಥೆಯು ಹೊಂದಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ರವರು ಶುಕ್ರಯಾನ-1 ಯೋಜನೆಯ ಕುರಿತು ಮಾತನಾಡಿ "ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಾಗಿದ್ದು, ವೆಚ್ಚವನ್ನು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಇಂದು ತಾಂತ್ರಿಕ ನಿಪುಣತೆ ಲಭ್ಯ ಇರುವುದರಿಂದ ಅತೀ ಕಡಿಮೆ ಸಮಯದಲ್ಲಿ ಶುಕ್ರ ಗ್ರಹ ಯೋಜನೆ ನಡೆಸಲು ಸಾಧ್ಯವಾಗುತ್ತಿದೆ. ಚಂದ್ರ ಮತ್ತು ಮಂಗಳ ಯಾನ ಯೋಜನೆಯಲ್ಲಿ ನಾವು ಕಂಡ ವಿಶಿಷ್ಟತೆಯನ್ನು ಗುರುತಿಸಿ ಶುಕ್ರಯಾನದ ಯೋಜನಾ ತಂಡವು ಕಾರ್ಯ ನಿರ್ವಹಿಸಲಿದೆ. ಇದು ವಿಶಿಷ್ಟವಾಗಿದ್ದರೆ ಮಾತ್ರ ಹಿಂದಿನ ಯೋಜನೆಗಳಂತೆ ಶ್ಲಾಘನೀಯವಾಗಲು ಸಾಧ್ಯ. " ಮತ್ತು ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಚಂದ್ರಯಾನ-3 ಜರುಗಲಿದೆ ಎಂದು ಹೇಳಿದರು.
ಭಾರತದ ಇಸ್ರೋ ಸಂಸ್ಥೆ ಮಾತ್ರವಲ್ಲದೇ ಅಮೇರಿಕಾದ ನಾಸಾ ಸಂಸ್ಥೆಯು ಸಹ ಭೂಮಿಯ 'ಅವಳಿ' ಗ್ರಹ ಶುಕ್ರನ ಅಧ್ಯಯನಕ್ಕೆ ಎರಡು ನೌಕೆಗಳನ್ನು ರವಾನಿಸಿದೆ. ಅಲ್ಲದೇ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಕೂಡ ಇದೇ ಗ್ರಹದ ಅಂಗಳಕ್ಕೆ ನೌಕೆ ಕಳಿಸುವ ಯೋಜನೆ ಘೋಷಣೆ ಮಾಡಿದೆ. ಇದರಿಂದ ಭಾರತವು ಶುಕ್ರನ ಮೇಲೆ ಕಾಲಿಡುವ ಅಮೇರಿಕಾ ಮತ್ತು ಇತರೆ ದೇಶಗಳ ಪೈಪೋಟಿಯ ಜೊತೆ ತನ್ನ ಹೆಸರನ್ನೂ ದಾಖಲಿಸಲಿದೆ ಎಂಬುದು ಹೆಮ್ಮೆಯ ಸಂಗತಿ.
ISRO Plans Mission to Venus, Eyes December 2024 Launch https://t.co/aEiSB3dBCt via @TheWireScience
— Siddharth (@svaradarajan) May 5, 2022
-ಅಭಿಜ್ಞಾ.ಕೆ