ಅರಿವಿನ ಮಾರ್ಗ ಬಸವಣ್ಣ

೧೨ ನೇ ಶತಮಾನದ  ಮಹಾನ್  ಚೇತನ  ವಚನಕಾರ  ಭಕ್ತಿಬಂಡಾರ  ಬಸವಣ್ಣ. ಜನರ  ಬವಣೆಗಳ ಆಲಿಸುವ  ಕಿವಿಯಾಗಿ, ಅರ್ಥೈಸಿಕೊಳ್ಳುವ  ಅವತಾರ  ಪರುಷ. ನಿರಾಕಾರನಾದ  ಭಗವಂತನು ಮನುಷ್ಯನ  ರೂಪದಲ್ಲಿ  ನೊಂದವರ  ನೆರವಿಗೆ  ಬರುತ್ತಾನೆ  ಎಂಬುದಕ್ಕೆ  ಇವರೆ  ಪ್ರತ್ಯಕ್ಷ  ಸಾಕ್ಷಿ. ತಮ್ಮ ವಚನಗಳ  ಮೂಲಕ  ಜನರಿಗೆ  ಬದುಕಿನ  ಸಾರವನ್ನು  ತಿಳಿಸಿದರು. ಜಾತಿ ,ಮತ ,ಭೇದ ಭಾವ ಎಲ್ಲವನ್ನು ಮರೆತು 'ಮಾನವ ಕುಲ ತಾನೊಂದೆ  ವಲಂ' ಎಂದು ನುಡಿದು ನಡೆದವರು. ಕೂಡಲಸಂಗಮ ದೇವ  ಎಂಬ  ಅಂಕಿತ ನಾಮದೊಂದಿಗೆ ಪ್ರಸಿದ್ಧರಾದವರು. ಇವರನ್ನು ‘ಕರ್ನಾಟಕದ ಮಾರ್ಟಿನ್ ಲೂಥರ್’ ಎಂದು ಸರ್ ರ್ಥರ್ ಮೈಲರ್ ಕರೆದರು.

        ಅಸಮಾನತೆ , ಅಸ್ಪೃಶ್ಯತೆ, ಮೇಲು ಕೀಳು, ಇಂತಹ  ವಿಚಾರಗಳಲ್ಲಿ  ಬಸವಣ್ಣನವರ  ಕೊಡುಗೆ ಅಪಾರ.೧೨ ನೆಯ  ಶತಮಾನದಲ್ಲಿಯೆ  ಅಂತರ್ಜಾತಿ  ವಿವಾಹಕ್ಕೆ  ಪ್ರೋತ್ಸಾಹ ನೀಡಿದ್ದರು.'ಕಾಯಕವೇ ಕೈಲಾಸ' ಎಂದು  ಹೇಳಿ  ಜನರ  ಪರಿವರ್ತನೆಗೆ  ಬಸವಣ್ಣ  ಸ್ಪೂರ್ತಿ. ಅಲ್ಲದೆ ಎನಗಿಂತ  ಕಿರಿಯರಿಲ್ಲ  ಶಿವಭಕ್ತರಿಗಿಂತ  ಹಿರಿಯರಿಲ್ಲ  ಎಂಬ  ತತ್ವ  ಭೋದಿಸಿದ  ಜ್ಞಾನಿ. ಜನರ ಉದ್ಧಾರಕ್ಕಾಗಿ  ಶ್ರಮಿಸಿದರು. ೧೨ ನೇ  ಶತಮಾನದ  ಶ್ರೇಷ್ಠ  ಚಿಂತಕ  ಎಂದರೆ  ತಪ್ಪಿಲ್ಲ. ಅನುಭವ ಮಂಟಪವು  ಬಸವಣ್ಣ  ನಿರ್ಮಿಸಿದ  ಅಲ್ಲಮಪ್ರಭು, ಅಕ್ಕಮಹಾದೇವಿ  ಅಂತಹ ವಚನಕಾರರನ್ನೊಳಗೊಂಡ  ಮಹಾ ವಿಶ್ವವಿದ್ಯಾಲಯವೇ  ಆಗಿತ್ತು.ಇಲ್ಲಿ  ಎಲ್ಲಾ  ಸಾಮಾಜಿಕ - ಆರ್ಥಿಕ  ಹಿನ್ನಲೆಯ  ಪುರುಷ  ಮತ್ತು  ಮಹಿಳೆಯರು  ಆಧ್ಯಾತ್ಮಿಕ  ಹಾಗು  ಪ್ರಾಪಂಚಿಕ  ಪ್ರಶ್ನೆಗಳನ್ನು ಮುಕ್ತವಾಗಿ  ಚರ್ಚಿಸಲು  ಸ್ವಾಗತಿಸಿತು. ಬಸವಣ್ಣನವರ  ಜೊತೆ ,೯೬,೦೦೦  ಶರಣರಿದ್ದರೆಂದು ಐತಿಹಾಸಿಕ  ಪುರಾವೆಗಳಿವೆ. ಬಸವಣ್ಣನವರು  ನಾಣ್ಯದ  ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗರಾಗಿದ್ದರು ಎಂಬುದೇ ಹೆಮ್ಮೆಯ ಸಂಗತಿ.

         

ಜನರ ಒಳಿತಿಗಾಗಿ  ಶ್ರಮಿಸಿದ, ಸಮಾಜದ ಸುಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ ,ಜ್ಞಾನಭಂಡಾರವಾಗಿದ್ದ  ಬಸವಣ್ಣನವರು  ಜಾತಿ ವರ್ಣಗಳನ್ನೇ  ಅಳಿಸಲು  ಹೋರಾಡಿದವರು ಇಂತಹ  ವಿಶ್ವ ಮಾನವನನ್ನು  ಒಂದೇ  ಸಮಾಜಕ್ಕೆ  ಸೀಮಿತಗೊಳಿಸಿದ್ದು  ಮಾತ್ರ  ವಿಪರ್ಯಸವೇ  ಸರಿ.

ಇಂದಿನ ಕಾಲಘಟ್ಟದಲ್ಲಿ ರಾಜಕೀಯವು ಧರ್ಮ ಜಾತಿಗಳ ನಡುವೆ ಘರ್ಷಣೆ ಉಂಟುಮಾಡಿ ಶಾಂತಿ ಸೌಹಾರ್ದತೆ  ಒಡೆಯುವ ಸಮಾಜವನ್ನು ಸೃಷ್ಟಿಮಾಡಿದೆ. ನಾನು ನನ್ನದು ನಾನೇ ಶ್ರೇಷ್ಠ ಎಂಬ ಅಜ್ಞಾನಿಗಳು ಮಾಡಿದ ಅಂಧಕಾರಕ್ಕೆ ಬಸವಣ್ಣನವರ ತತ್ವಗಳೇ ಬೆಳಕಾಗಬೇಕಿದೆ. ಬಸವಣ್ಣ ತೋರಿದ ಜ್ಞಾನಮಾರ್ಗವನ್ನು  ಅನುಸರಿಸಬೇಕಾದ ಅನಿವಾರ್ಯವಿದೆ. ಪ್ರತಿಯೊಬ್ಬರಿಗೂ ತಿಳಿಯಬೇಕಾದ ಜ್ಞಾನಭಂಡಾರವೇ ಬಸವಣ್ಣ.

 

                                                                                                                                                                                                             - ನಂದಿನಿ .ಎಸ್