ಕೆ.ಪಿ.ಎಸ್.ಸಿ ಕಛೇರಿಗೆ ಬೀಗ ಹಾಕುವಂತೆ ‘ಆಪ್’ ಒತ್ತಾಯ

ಕೆಪಿಎಸ್ಸಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಆಮ್ಆದ್ಮಿ ಪಾರ್ಟಿಯ ಕಾರ್ಯಕರ್ತರು ಬೃಹತ್ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ಕೆಪಿಎಸ್ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಆರಂಭದಲ್ಲೇ ಬಂಧಿಸಿದರು.


 

ಮಾಧ್ಯಮದವರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ನಾಡಿನ  ಯುವಜನತೆಗೆ  ಉದ್ಯೋಗ  ಕಲ್ಪಿಸುವ  ಮಹತ್ವಾಕಾಂಕ್ಷೆಯ  ಉದ್ದೇಶದಿಂದ ಕರ್ನಾಟಕ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಗಿದೆ. ಆದರೆ  ಇದು  ಉದ್ಯೋಗಗಳನ್ನು  ಭ್ರಷ್ಟ ರಾಜಕಾರಣಿಗಳಿಗೆ  ಕೋಟಿ ಕೋಟಿ  ರೂಪಾಯಿಗಳಿಗೆ  ಮಾರಾಟ  ಮಾಡುವ  ಅಂಗಡಿಯಾಗಿ ಪರಿವರ್ತನೆಗೊಂಡಿದೆ. ಇದರ ಕುರಿತಾಗಿ ಎಲ್ಲಾ ಸರ್ಕಾರಗಳು ಮಾತನಾಡಿವೆ ಆದರೆ ಇದಕ್ಕೆ ಕಾಯಕಲ್ಪ ಮಾತ್ರ ಇನ್ನೂ ಆಗಿಲ್ಲ. ರಾಜ್ಯದ ಮೂರು ಕೋಟಿ ಯುವಜನತೆಯ ಪರವಾಗಿ ಹಾಗು ಈ ವರೆಗೂ ರಾಜ್ಯವನ್ನಾಳಿದ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಬಲ ಪ್ರದರ್ಶಿಸುವ ಸಮಯ ಬಂದಿದೆ.  ಅಕ್ರಮಕ್ಕೆ  ಹೆಸರುವಾಸಿಯಾಗಿರುವ  ಕೆಪಿಎಸ್ಸಿಯನ್ನು  ಸರಿದಾರಿಗೆ  ತರಲು ಸಾಧ್ಯವಾಗದಿದ್ದರೆ, ಅದನ್ನು ಮುಚ್ಚಿ ಬಿಡುವುದೇ ಒಳ್ಳೆಯದು. ”ಎಂದು  ಆಕ್ರೋಶ  ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್ ವಿ. ಸದಂ, ಚನ್ನಪ್ಪ ಗೌಡ ನೆಲ್ಲೂರು, ಲಕ್ಷ್ಮೀಕಾಂತ್ ರಾವ್, ರವಿಚಂದ್ರ ನೆರಬೆಂಚಿ, ಸಮೀರ್, ಫರೀದ್, ಡಾ. ಸತೀಶ್ ಕುಮಾರ್, ಶಾಶಾವಲ್ಲಿ, ಗೀತಾ, ಪ್ರಕಾಶ್ ನೆಂಡುಗಂಡಿ, ಮರಿಯಾ ಮತ್ತಿತರ ಮುಖಂಡರು, ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.