ಭಟ್ರು ಎಲ್ಲರ ತಲೆ ಗೆ ಹುಳ ಬಿಟ್ರೆ...!

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುವ ಚಿತ್ರಗಳು ವಿಶಿಷ್ಠವಾಗಿರುತ್ತದೆ. ಅವರ ಚಿತ್ರಗಳಂತೆ ಅವರ ಕಲ್ಪನೆಗಳು ಕೂಡ ವಿಶೇಷವಾಗಿದ್ದು, ಭಟ್ರು ಹೇಳುವ ಸಿಂಪಲ್ ಲೈನ್‍ನಲ್ಲಿ ಕೂಡ ಅರ್ಥಪೂರ್ಣ ಸಂದೇಶವಿರುತ್ತೆ. ಈ ಮಾತಿಗೆ ಸದ್ಯ ಯೋಗರಾಜ್ ಭಟ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಯೋಗರಾಜ್ ಭಟ್ ಅವರು ಕೊರೊನಾ ವೈರಸ್ ಬಗ್ಗೆ ಪೋಸ್ಟ್‌ವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, 'ಅಕಸ್ಮಾತ್, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್‍ಗಳಾಗಿದ್ದು, ಈ ಕೊರೊನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ 'ಔಷಧ' ಆಗಿದ್ದರೆ ಏನು ಮಾಡುವುದು? ಎಂದು ಪ್ರಶ್ನೆ ಕೇಳಿ ಯೋಗರಾಜ್ ಭಟ್ ಅವರು ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಅಲ್ಲದೇ ಇದು ನಾನು ಹೇಳಿದ್ದಲ್ಲ, ಯಾರೋ ಹೇಳಿದ್ದು ಎಂದು ತಿಳಿಸಿ ಜಾಣತನದಿಂದ ಜಾರಿಕೊಂಡಿದ್ದಾರೆ.

ಇದನ್ನು ಓದಿದವರಿಗೆ ಭಟ್ರು ಹೇಳುತ್ತಿರೋದು ನಿಜವಿರಬಹುದಾ ಅನ್ನೋ ಪ್ರಶ್ನೆ ಕಾಡುತ್ತಿರೋದಂತೂ ಸತ್ಯ. ಮೇಲ್ನೋಟಕ್ಕೆ ಭಟ್ರು ಮಾತು ಉಡಾಫೆ, ತಮಾಷೆ ಮಾತಿನಂತೆ ಕಂಡರೂ ಇದರಲ್ಲಿ ಅರ್ಥಪೂರ್ಣವಾದ ಸಂದೇಶವಿದೆ. ಮನುಷ್ಯರು ಪ್ರಕೃತಿಯ ಮೇಲೆ ಎಸಗುತ್ತಿರುವ ದೌರ್ಜನ್ಯ ಅಂತ್ಯವಾಗುವುದು ಮಾನವನ ಅಂತ್ಯದೊಂದಿಗೆ, ಹೀಗಾಗಿ ಪ್ರಕೃತಿಯೇ ಮಾನವನ ಬಲಿ ಪಡೆಯುತ್ತದೆ ಎಂಬ ಗೂಡಾರ್ಥ ಯೋಗರಾಜ್ ಭಟ್ ಅವರ ಮಾತಿನಲ್ಲಿದೆ.