ಮಾರ್ಚ್ 31ರವರೆಗೂ ಕರ್ನಾಟಕ ಬಂದ್! ತುರ್ತು ಸಚಿವ ಸಂಪುಟ ಸಭೆಯಲ್ಲಿ ಬಂದ್ ವಿಸ್ತರಣೆಯ ಮಹತ್ವದ ನಿರ್ಧಾರ
ಕರೊನಾ ವೈರಸ್ ಪ್ರಪಂಚದಾದ್ಯಂತ ತನ್ನ ಯಮರೂಪ ದರ್ಶನ ಮಾಡಿಸುತ್ತಿದೆ. ಪೂರ್ತಿ ವಿಶ್ವವೇ ವೈರಸ್ಗೆ ಹೆದರಿ ಮನೆಯೊಳಗೆ ಕುಳಿತಿದೆ. ದೇಶ ಮತ್ತು ರಾಜ್ಯದಲ್ಲಿಯೂ ಸಹ ವೈರಸ್ನ ದಾಳಿ ಹೆಚ್ಚಾಗಿಯೇ ನಡೆದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈರಸ್ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ರಾಜ್ಯದಲ್ಲಿ ಮಾರ್ಚ್ 14ರಿಂದ ಹೇರಲಾಗಿದ್ದ ನಿರ್ಬಂಧವನ್ನು ಮಾರ್ಚ್ 31ರವೆಗೆ ಮುಂದುವರೆಸುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ತುರ್ತು ಸಚಿವ ಸಂಪುಟ ಸಭೆ ಇಂದು ಮುಕ್ತಾಯಗೊಂಡಿದ್ದು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,
ಮಾರ್ಚ್ 14ರಿಂದ ಒಂದು ವಾರದ ಕಾಲ ರಾಜ್ಯವನ್ನು ಅರೆ ಬಂದ್ ಮಾಡುವುದಾಗಿ ಸರ್ಕಾರ ಆದೇಶಿಸಿತ್ತು. ಅದರಂತೆ ಚಿತ್ರಮಂದಿರಗಳು, ಮಾಲ್ಗಳು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿತ್ತು.
ಇದೀಗ ಬಂದ್ನ ಕಾಲಾವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ಮುಂದಿನ 13 ದಿನಗಳ ಕಾಲ ಮಾಲ್, ಚಿತ್ರಮಂದಿರ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳು ಬಾಗಿಲು ತೆರೆಯುವುದಿಲ್ಲ. ನಗರ ಮತ್ತು ಸ್ಥಳೀಯ ಪಂಚಾಯಿತಿ ಚುನಾವಣೆಗಳನ್ನೂ ಸಹ ಮುಂದೂಡಿರುವುದಾಗಿ ತಿಳಿಸಲಾಗಿದೆ.