ಕಮಲದಿಂದ ಜಾರಿದ ''ಜಾರ್ಖಂಡ್'' ಹನಿ
ಗುಡ್ಡಗಾಡು ರಾಜ್ಯದ ಜಾರ್ಖಂಡ್‌ನಲ್ಲಿ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾ ದಳ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಐದು ವರ್ಷಗಳ ಆಡಳಿತ ಬಳಿಕ ಬಿಜೆಪಿ ಅಧಿಕಾರ ಕೈ ಜಾರಿ ಹೋಗಿದೆ.ಒಟ್ಟು 81 ಸೀಟುಗಳ ಪೈಕಿ ಕಾಂಗ್ರೆಸ್-15, ಜೆಎಎಂ-30ಮತ್ತು ಆರ್‌ಜೆಡಿ-1 ಸೀಟು ಗೆದ್ದುಕೊಂಡಿದ್ದು, ಬಹುಮತಕ್ಕೆ ಅಗತ್ಯವಿರುವ 41ರ ಗಡಿ ದಾಟಿದೆ. ಬಿಜೆಪಿ 25 ಸೀಟುಗಳನ್ನು ಜಯಿಸಿದೆ. ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿದ್ದ ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ 3ರಲ್ಲಿ, ಜಾರ್ಖಂಡ್ ವಿಕಾಸ್ ಮೋರ್ಚಾ 3ರಲ್ಲೂ, ಎನ್‌ಸಿಪಿ -1, ಸಿಪಿಎಐಎಂ-1ಮತ್ತು ಸ್ವತಂತ್ರ ಅಭ್ಯರ್ಥಿ 2ರಲ್ಲಿ ಗೆಲುವು ಸಾಧಿಸಿದ್ದಾರೆ.ಅಯೋಧ್ಯೆ ರಾಮಮಂದಿರ ತೀರ್ಪು ಮತ್ತು ನಾಗರಿಕತ್ವ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಚುನಾವಣಾ ಸಮಾವೇಶವೊಂದರಲ್ಲಿ ಇನ್ನು ನಾಲ್ಕು ತಿಂಗಳೊಳಗೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದರು. ನಾಗರಿಕತ್ವ ಕಾಯ್ದೆಯನ್ನು ಬಿಜೆಪಿ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು.
ಇರ್ಫಾನ್‌ಗೆ ವೋಟ್ ಕೊಟ್ಟರೆ ರಾಮಮಂದಿರ ಕಟ್ಟುವುದು ಹೇಗೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರದಲ್ಲಿ ಹೇಳಿದ್ದರು. ಆದರೆ ಆ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ.ಕಾಂಗ್ರೆಸ್ ಕೂಟದಿಂದ ಜೆಎಂಎಂ ನಾಯಕ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಪುತ್ರ ಹೇಮಂತ್ ಸೊರೇನ್ ಮುಖ್ಯಮಂತ್ರಿ ಆಗುವುದು ಖಚಿತ. ಬರ್‌ಹೈತ್ ಮತ್ತು ದುಮ್ಕಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಹೇಮಂತ್ ಸೊರೇನ್ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಿಯಮಗಳ ಪ್ರಕಾರ ಈಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸೊರೇನ್ ರಾಜೀನಾಮೆ ಕೊಡುವ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗುತ್ತದೆ.