ವಿಶ್ವ ನಾಯಕನಾಗಲು ಕೊರೊನಾ ಅಸ್ತ್ರ ಬಳಸಿತೇ ಚೀನಾ...?
ಕೊರೊನಾ, ಇಡಿ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿರುವ ಕಣ್ಣಿಗೆ ಕಾಣದ ಅಗೋಚರ ಶತ್ರು. ಜಗತ್ತಿನ ಪ್ರಬಲ ರಾಷ್ಟ್ರ ಗಳಿಂದ ಹಿಡಿದು ಪುಟ್ಟ ರಾಷ್ಟ್ರಗಳವರೆಗೆ ಎಲ್ಲವೂ ಕೊರೊನಾ ಹಾವಳಿಯಿಂದ ಕಂಗೆಟ್ಟು ಹೋಗಿವೆ. ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶ ಸಹ ಕೊರೊನಾ ನಿಯಂತ್ರಿಸಲು ಪರದಾಡುತ್ತಿದೆ. ಇಟಲಿ ಸ್ಪೇನ್, ಇರಾನ್ ಸೇರಿದಂತೆ 180 ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಕೊರೊನಾ ಸೋಂಕು ಹರಡಿದ್ದು ಲಕ್ಷಾಂತರ ಜನರಿಗೆ ಸೋಂಕು ತಗಲಿದೆ.ಇನ್ನು ಈ ಮಹಾಮಾರಿಗೆ ಇದುವರೆಗೂ ಜಗತ್ತಿನಲ್ಲಿ 33 ಸಾವಿರಕ್ಕೂ ಅಧಿಕ ಜನ ಪ್ರಾಣ ತೆತ್ತಿದ್ದಾರೆ. ಇಟಲಿಯಾಂತೂ ಅಕ್ಷರಶಃ ಸ್ಮಶಾನವಾಗಿದ್ದು , 6 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದುವರೆಗೂ
10,000 ಕ್ಕೂ ಅಧಿಕ ಜನ ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕಾ ಒಂದರಲ್ಲೇ ಕೊರೊನಾ ಸೊಂಕಿತರ ಸಂಖ್ಯೆ ಲಕ್ಷ ದಾಟಿದೆ. ಸ್ಪೇನ್, ಇರಾನ್ , ಬ್ರಿಟನ್ ಮುಂತಾದ ದೇಶಗಳಲ್ಲಿ ಸಾವಿನ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ವಿಶ್ವದ ದೊಡ್ಡ ದೊಡ್ಡ ಆರ್ಥಿಕತೆಗಳು ನೆಲಕಚ್ಚಿವೆ. ಇನ್ನು ಇದೇ ಕೊರೊನಾ ಕಾರಣಕ್ಕಾಗಿ ಭಾರತ ಸಹ 21 ದಿನಗಳ ಲಾಕ್ ಡೌನ್ ಗೆ ಒಳಗಾಗಿದೆ.
ಕೊರೊನಾ ಎಂಬ ಕ್ರೂರಿಯ ನಿಯಂತ್ರಣಕ್ಕೆ ಇಡಿ ವಿಶ್ವವೇ ಹೋರಾಡುತ್ತಿರುವ ಸಮಯದಲ್ಲಿ ಅದೊಂದು ರಾಷ್ಟ್ರ ಮಾತ್ರ ತನ್ನ ದೇಶದಲ್ಲಿ ಕೊರೊನಾ ವನ್ನು ಸಂಪೂರ್ಣ ನಿಯಂತ್ರಿಸಿ ಈಗ ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಸಹಾಯ ಮಾಡುವ ಮಾತನಾಡುತ್ತಿದೆ. ಯಾವುದು ಆ ರಾಷ್ಟ್ರ ಅಂತಾ ಯೋಚನೆ ಮಾಡ್ತಿದ್ದೀರಾ ? ಅದುವೇ ಕೊರೊನಾ ಸೃಷ್ಟಿಕರ್ತ ಚೀನಾ.
ಇಡಿ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಜನ್ಮ ಪಡೆದಿದ್ದು ಚೀನಾದ ವುಹಾನ್ ನಗರದಲ್ಲಿ. ವುಹಾನ್ ಚೀನಾದ ಕೊಳಕು ನಗರಗಳಲ್ಲಿ ಇದು ಒಂದು. ಅತಿ ದೊಡ್ಡ ಮೌಂಸ ಮಾರುಕಟ್ಟೆ ಇದೇ ನಗರದಲ್ಲಿದೆ. ಹೆಚ್ಚು ಬಡವರೇ ವಾಸಿಸುವ ಸ್ಥಳ. ಇಲ್ಲಿ ಹುಟ್ಟಿಕೊಂಡ ವೈರಸ್ ನಿಧಾನವಾಗಿ ವುಹಾನ್ ನಗರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು. ವುಹಾನ್ ನಗರದಲ್ಲಿ ಹುಟ್ಟಿದ ವೈರಸ್ ಇಂದು ಇಡಿ ಜಗತ್ತನ್ನೇ ಆವರಿಸಿಕೊಂಡಿದೆ. ಆದರೆ ವಿಚಿತ್ರವೆಂದರೆ ವುಹಾನ್ ಗೆ ಹತ್ತಿರದಲ್ಲೇ ಇರುವ ಚೀನಾದ ಬೀಜಿಂಗ್, ಶಾಂಘೈ ನಗರಗಳಿಗೆ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿಲ್ಲ.ಸದ್ಯ ಇದು ಜಗತ್ತಿನ ಅನೇಕ ರಾಷ್ಟ್ರಗಳಿಗೆ ಚೀನಾ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ಇಲ್ಲಿ ಒಂದು ಅಂಶವನ್ನು ಗಮನಿಸಲೇ ಬೇಕು.ಅದು ವುಹಾನ್ ನಲ್ಲಿ ಕೊರೊನಾ ತನ್ನ ಮೃತ್ಯುಕೇಕೆ ಹಾಕುತ್ತಾ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವಾಗಲೂ ವುಹಾನ್ ನಿಂದ ಕೇವಲ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಬೀಜಿಂಗ್, ಶಾಂಘೈ ನಗರದಲ್ಲಿ ಮೃತ ಪಟ್ಟವರ ಸಂಖ್ಯೆ ಎರಡಂಕಿ ದಾಟಲಿಲ್ಲ. ಹೇಳಿ ಕೇಳಿ ಬೀಜಿಂಗ್ ,
ಶಾಂಘೈ ಚೀನಾದ ಶ್ರೀಮಂತ ಕೈಗಾರಿಕಾ ಪ್ರದೇಶಗಳು. ವುಹಾನ್ ನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಯುರೋಪ್ ರಾಷ್ಟ್ರಗಳಿಗೆ ಹಬ್ಬಿದ ಕೊರೊನಾ ವುಹಾನ್ ನ ಅಕ್ಕ ಪಕ್ಕದ ನಗರಗಳಿಗೆ ಹಬ್ಬದ್ಡಿರುವುದು ಚೀನಾ ಮೇಲೆ ಅನುಮಾನ ಹುಟ್ಟುವಂತೆ ಮಾಡಿದೆ.
ಕೊರೊನಾ ವೈರಸ್ ವಿಚಾರದಲ್ಲಿ ಚೀನಾದ ನಡೆ ಮೊದಲಿನಿಂದಲೂ ಸಂಶಯಾಸ್ಪದವಾಗಿಯೇ ಇದೆ. ಜನವರಿ ಆರಂಭದಲ್ಲೇ ಕೊರೊನಾ ಪ್ರಕರಣ ಚೀನಾದಲ್ಲಿ ಬೆಳಕಿಗೆ ಬಂದರು ಜಗತ್ತಿನೊಂದಿಗೆ ಅದು ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ. ಇದೇ ಸಮಯದಲ್ಲಿ ವುಹಾನ್ ನಿಂದ ಸಾವಿರಾರು ಜನರು ಜಗತ್ತಿನ ವಿವಿಧೆಡೆ ಸಂಚರಿಸಿ ವೈರಸ್ ಹರಡಲು ಕಾರಣರಾದರು. ವಿಶ್ವ ಆರೋಗ್ಯ ಸಂಸ್ಥೆ ಸಹ ಚೀನಾ ದ ವರದಿಗಳನ್ನು ಆಧರಿಸಿ ಮೊದಲಿಗೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಹೇಳಿಕೆ ನೀಡಿತು. ಕೊನೆಗೆ ಜಗತ್ತಿನ ಎದುರು ಕೊರೊನಾದಿಂದಾಗಿ ಚೀನಾ ನರಳುತ್ತಿದೆ ಎಂದು ಮೊಸಳೆ ಕಣ್ಣೀರು ಹಾಕಿತು.
ಆದರೆ ಇಂದು ಅದೇ ಚೀನಾ ತನ್ನ ಒಡಲಲ್ಲಿ ಹುಟ್ಟಿದ ಕೊರೊನಾ ವನ್ನು ನಿಯಂತ್ರಿಸಿದೆ. ಮತ್ತೆ ತನ್ನ ಕೈಗಾರಿಕೆಗಳನ್ನು ಆರಂಭಿಸಿದೆ. ಜಗತ್ತಿನ ಮುಂದುವರೆದ ರಾಷ್ಟ್ರಗಳು ಕೊರೊನಾ ರೋಗ ಪರೀಕ್ಷಿಸುವ ಕಿಟ್ ಗಳು ಸೇರಿದಂತೆ ವಿವಿಧ ವೈದ್ಯಕೀಯ ಸಾಮಗ್ರಿಗಳಿಗಾಗಿ ಕಮ್ಯುನಿಸ್ಟ್ ರಾಷ್ಟ್ರದ ಮುಂದೆ ಮಂಡಿಯೂರಿವೆ.ಒಂದೆಡೆ ಶ್ರೀಮಂತ ರಾಷ್ಟ್ರ ಗಳಿಗೆ ದುಬಾರಿ ಬೆಲೆಯಲ್ಲಿ ಕಳಪೆ ಗುಣಮಟ್ಟದ ವೈದ್ಯಕೀಯ ಸಾಮಗ್ರಿಯನ್ನು ಚೀನಾ ಪೂರೈಕೆ ಮಾಡುತ್ತಾ ಸಂಕಷ್ಟದ ಸಮಯದಲ್ಲೂ ವ್ಯಾಪಾರಲಾಭವನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ಬಡ ರಾಷ್ಟ್ರಗಳಿಗೆ ಸಾಲದ ರೂಪದಲ್ಲಿ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಿ ತನ್ನ ವಸಾಹತುಶಾಹಿ ಯನ್ನು ಸ್ಧಾಪಿಸುತ್ತಿದೆ.
ಇದನ್ನೇಲ್ಲಾ ಗಮನಿಸಿದ ಬಳಿಕ ಜಗತ್ತಿನ ನಾಯಕನಾಗಲು ಚೀನಾ ಕೊರೊನಾ ಎಂಬ ಬಯೋ ವೆಪನ್ ಅಸ್ತ್ರ ಬಳಸಿತೇ ಎಂಬ ಅನುಮಾನ ಮೂಡಿಸುತ್ತಿದೆ.ಆದ್ದರಿಂದಲೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಅನ್ನು ಚೈನೀಸ್ ವೈರಸ್ ಎಂದು ಕರೆದಿದ್ದು, ಕೊರೊನಾದಿಂದ ಜಗತ್ತಿನಾದ್ಯಂತ ಉಂಟಾದ ನಷ್ಟಕ್ಕೆ ಚೀನಾವನ್ನು ಹೊಣೆಯಾಗಿಸಬೇಕೆಂದು ಹೇಳಿದ್ದಾರೆ.