ಕೊರೊನಾ ವೈರಸ್ ಆರ್ಭಟ : ಚೀನಾ ಹಾಗೂ ಜಪಾನ್ ನಲ್ಲಿ ಸಿಲುಕಿದ್ದ 192 ಭಾರತೀಯರು ರಕ್ಷಣೆ....

ನವದೆಹಲಿ : ಕೊರಾನಾ ವೈರಸ್ ಪೀಡಿತ ಚೀನಾ ಹಾಗೂ ಜಪಾನ್ ದೇಶದಲ್ಲಿ ಸಿಲುಕಿದ್ದ 192 ಭಾರತೀಯರನ್ನು ಸರ್ಕಾರ ವಾಪಸ್ ದೇಶಕ್ಕೆ ಕರೆತಂದಿದೆ. ಚೀನಾದ ವುಹಾನ್ ನಗರದಲ್ಲಿ ಸಿಲುಕಿದ್ದ 73 ಜನರನ್ನು ಸಿ- 17 ಸೇನಾ ವಿಮಾನದ ಮೂಲಕ ಕರೆತಂದರೆ, ಜಪಾನ್ ಕಡಲ ತೀರದಲ್ಲಿ  ಇದೇ ತಿಂಗಳ 5 ರಿಂದ ಐಷಾರಾಮಿ ಹಡಗಿನಲ್ಲಿ ಬಂಧಿಗಳಾಗಿದ್ದ 119 ಜನರನ್ನು ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿಗೆ ಕರತರಲಾಯಿತು.

ವುಹಾನ್ ನಗರದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸರ್ಕಾರ ಸಿ - 17 ಸೇನಾ ವಿಮಾನವನ್ನು ಕಳುಹಿಸಿಕೊಟ್ಟಿತ್ತು. ಭಾರತೀಯ ವಿಮಾನಕ್ಕೆ ಚೀನಾ ಅಧಿಕಾರಿಗಳು ಅನುಮತಿ ನೀಡಲು ತಡ ಮಾಡಿದ ಕಾರಣ ರಕ್ಷಣಾ ಕಾರ್ಯ ಸ್ವಲ್ಪ ವಿಳಂಬವಾಯಿತು. ಭಾರತೀಯರ ರಕ್ಷಣೆಗೆಂದು ವುಹಾನ್ ನಗರಕ್ಕೆ ತೆರಳಿದ್ದ ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸಹ ಇದೇ ವಿಮಾನದಲ್ಲಿ ವಾಪಸ್ಸಾದರು.

ಇನ್ನು ಸೋಂಕು ಪೀಡಿತರಿದ್ದ ಕಾರಣ  ಕಳೆದೊಂದು ತಿಂಗಳಿನಿಂದ ಜಪಾನ್ ಕಡಲ ತೀರದಲ್ಲಿ ನಿಂತಿರುವ ಡೈಮಂಡ್ ಪ್ರಿನ್ಸೇಸ್ ಹಡಗಿನಲ್ಲಿ ಒಟ್ಟು 138 ಭಾರತೀಯರು ಸಿಲುಕಿದ್ದರು. ಅದರಲ್ಲಿ 119 ಜನರನ್ನು ರಕ್ಷಿಸಿ ವಾಪಸ್ ಕರೆತಂದಿದ್ದು, ಉಳಿದ  16 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ಜಪಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಭಾರತಕ್ಕೆ ಕರೆತಂದಿರುವ ಎಲ್ಲರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ದೆಹಲಿಯಲ್ಲಿ ಇಂಡೋ ಟಿಬೆಟಿಯನ್ ಪೋಲೀಸ್ ರೂಪಿಸಿರುವ ಕೇಂದ್ರದಲ್ಲಿ ಚೀನಾದಿಂದ ಕರೆತಂದವರನ್ನು ಹಾಗೂ ಭಾರತೀಯ ಸೇನೆ ಹರಿಯಾಣದಲ್ಲಿ ರೂಪಿಸಿರುವ ಕೇಂದ್ರದಲ್ಲಿ ಜಪಾನ್ ನಿಂದ ಕರೆತಂದವರನ್ನು ಇರಿಸಲಾಗುತ್ತದೆ.