ವಿಶ್ವದಲ್ಲೇ ಅತೀ ದೊಡ್ಡ ಸೋಲಾರ್ ಪಾರ್ಕ್ ಬಳಕೆಗೆ ಮುಕ್ತ
ವಿಶ್ವದ ಏಕೈಕ ಅತೀ ದೊಡ್ಡ ಸೋಲಾರ್ ಪಾರ್ಕ್ ಕರ್ನಾಟಕದಲ್ಲಿ ತಲೆ ಎತ್ತಿದ್ದು, ಇದೀಗ ಬಳಕೆಗೆ ಮುಕ್ತವಾಗಿದೆ. ಇದು ರಾಜ್ಯಕ್ಕೆ, ದೇಶಕ್ಕೆ ಹೆಮ್ಮಯ ವಿಷಯದ ಜತೆಗೆ ಬರದಿಂದ ತತ್ತರಿಸಿದ ಭೂಮಿಯಲ್ಲೇ ಇದನ್ನು ಅಳವಡಿಸಲಾಗಿದೆ. ಇದರಿಂದ ಕೃಷಿಗೆ ಬಹಳ ದೊಡ್ಡ ಹಾನಿಯಾಗಿಲ್ಲ. ಕಳೆದ ವಾರ ಟ್ವೀಟ್ ಮಾಡಿರುವ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಮುಂದಿನ ಹೆಜ್ಜೆ ಇಟ್ಟಿದೆ. ತುಮಕೂರಿನ ಪಾವಗಡ ವಿಶ್ವದ ದೊಡ್ಡ ಸೌರ ವಿದ್ಯುತ್ ಘಟಕ ಕಾರ್ಯಾರಂಭ ಮಾಡಿದೆ ಎಂದು ಘೋಷಿಸಿದ್ದಾರೆ.
12 ಸಾವಿರ ಕೋಟಿ ರೂ.
ಸುಮಾರು 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಸೋಲಾರ್ ಪಾರ್ಕ್ ನಿರ್ಮಾಣವಾಗಿದೆ. ರೈತರಿಂದ ಭೂಮಿಯನ್ನು ಪಡೆದು ಈ ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
13 ಸಾವಿರ ಎಕರೆ
ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬರದಿಂದಾಗಿ ಕೃಷಿಗೆ ಯೋಗ್ಯವಾಗಿರದ ಭೂಮಿಯನ್ನು ರೈತರಿಂದ ಗುತ್ತಿಗೆ ಪಡೆಯಲಾಗಿದೆ.
ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ರೈತರಿಂದ ಪಡೆದ ಭೂಮಿಗೆ ಪ್ರತಿ ಎಕರೆಗೆ 21 ಸಾವಿರ ರೂ. ಗುತ್ತಿಗೆ ಹಣವನ್ನು ನೀಡುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಶೇ. 5ರಷ್ಟು ಹಣವನ್ನು ಹೆಚ್ಚಳ ಮಾಡಲಾಗುತ್ತದೆ.
16,500 ಕೋಟಿ ರೂ. ವೆಚ್ಚ
ಒಟ್ಟು ಅಂದಾಜು 16,500 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಯೋಜನೆಯಿಂದ 3 ಸಾವಿರ ಮಂದಿ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ.
ವಿದ್ಯುತ್ ಉತ್ಪಾದನೆ ಹೇಗೆ?
2,000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್ ಅನ್ನು ತಲಾ 250 ಮೆ.ವ್ಯಾ. ಸಾಮರ್ಥ್ಯದ 8 ಬ್ಲಾಕ್‌ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿ 250 ಮೆಗಾವ್ಯಾಟ್ ಸೌರ ವಿದ್ಯುತ್ ಬ್ಲಾಕ್ 220 ಕೆ.ವಿ. ಸಾಮರ್ಥ್ಯದ ಒಂದು ಪೋಲಿಂಗ್ ಉಪಕೇಂದ್ರ ಸ್ಥಾಪಿಸಲಾಗಿದೆ. ಈ 250 ಮೆಗಾ ವ್ಯಾಟ್ ಸಾಮರ್ಥ್ಯದ ಬ್ಲಾಕ್ ಅನ್ನು ಮತ್ತೆ 50 ಮೆಗಾವ್ಯಾಟ್ ಸಾಮರ್ಥ್ಯದ ಉಪ ಬಾಕ್‌ಗಳಾಗಿ ವಿಭಾಗಿಸಲಾಗಿದೆ. ಹೀಗಾಗಿ 550 ಮೆಗಾವ್ಯಾಟ್ ಸಾಮರ್ಥ್ಯದ ಉಪ ಬ್ಲಾಕ್‌ಗಳು 33 ಕೆವಿ ಅಥವಾ 66 ಕೆವಿ ಭೂಗತ ಕೇಬಲ್‌ಗಳ ಮೂಲಕ ಪೋಲಿಂಗ್ ಉಪಕೇಂದ್ರಕ್ಕೆ ವಿದ್ಯುತ್ ಹರಿಸಲಾಗುತ್ತದೆ. ಇಲ್ಲಿಂದ ಈ ವಿದ್ಯುತ್ ಅನ್ನು 220 ಕೆ.ವಿ. ಪೂಲಿಂಗ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.
2050 ಮೆಗಾ ವ್ಯಾಟ್
ಪಾವಗಡದಲ್ಲಿ ಒಟ್ಟು 2,050 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಆರಂಭದಲ್ಲಿ 2,000 ಮೆ.ವ್ಯಾ. ಗುರಿ ಇದ್ದರೂ ಬಳಿಕ 50 ಮೆ.ವ್ಯಾ. ಹೆಚ್ಚಿಸಲಾಗಿತ್ತು. ಈಗ ಸಂಪೂರ್ಣವಾಗಿ ಸೌರಶಕ್ತಿ ಉತ್ಪಾದನೆಗೆ ಮುಕ್ತವಾಗಿದೆ