ಶಿವನು ಬಿಲ್ವಪತ್ರೆ ಪ್ರಿಯ..
ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು.ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಉತ್ತರ ಭಾರತ ಹಾಗೂ ನೇಪಾಳದಲ್ಲಿ ಶಿವನ ಆರಾಧಕರು ಭಂಗ ಮತ್ತು ಲಸ್ಸಿಯನ್ನು ಕುಡಿಯುತ್ತಾರೆ (ಮಹಾರಾಷ್ಟ್ರದಲ್ಲಿ ಇದನ್ನು ಕಡ್ಡಾಯವಾಗಿ ಕುಡಿದು ಹಬ್ಬವನ್ನು ಆಚರಿಸುತ್ತಾರೆ, ಇದು ಅಮಲು ಪದಾರ್ಥವಾಗಿದೆ) ಇದು ಶಿವನಿಗೆ ತುಂಬಾ ಪ್ರೀತಿಯೆಂದು ಹೇಳುತ್ತಾರೆ. ಮಹಾಶಿವರಾತ್ರಿ ಹಬ್ಬದ ಆಚರಣೆ ಕುರಿತಂತೆ ಅನೇಕ ದಂತಕಥೆಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಒಂದು ದಿನ ಕಣ್ಣಪ್ಪನೆಂಬ ಬೇಟೆಗಾರ ಬಿಲ್ವ ಪತ್ರೆ ಮರದ ಮೇಲೆ ಕುಳಿತು, ದಿನವಿಡೀ ಉಪವಾಸವಿದ್ದು, ಅಕಸ್ಮಿಕವಾಗಿ ಶಿವರಾತ್ರಿಯಂದು ಬಿಲ್ವದ ಎಲೆಗಳನ್ನು ಕೆಳಗಿದ್ದ ಶಿವಲಿಂಗಕ್ಕೆ ಹಾಕುತ್ತಿದ್ದನು. ಈ ಮೂಲಕ ಶಿವಪೂಜೆ ನಡೆಸಿದನು. ಆತನ ಭಕ್ತಿಗೆ ಮಾರುಹೋದ ಶಿವನು ಆತನ ಎಲ್ಲ ಪಾಪ ಕರ್ಮಗಳನ್ನು ಕ್ಷಮಿಸಿ ಮುಕ್ತಿ ದೊರಕಿಸಿದನು. ಆದ್ದರಿಂದ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ
ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.
ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ.