ಮಕ್ಕಳಿದ್ದ ಮನೆಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ತಂದೆ!
ಬೆಂಗಳೂರು:- ಮಕ್ಕಳು ನನ್ನ ಬಿಟ್ಟು ಹೋದರು ಎಂಬ ಕಾರಣಕ್ಕೆ ತಂದೆಯೊಬ್ಬ ಮಕ್ಕಳು ಮಲಗಿದ್ದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಕರಣದ ಸಂಬಂಧ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಂಕರ್ ಎಂಬಾತನನ್ನು ಬಂಧಿಸಿದ್ದಾರೆ.
ಪುತ್ರಿ ಅಮಲಾ ಯಲಹಂಕದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಹೋದರ ಯಶ್ಪಾಲ್ ಹಾಗೂ ತಂದೆ ಶಂಕರ್ ಜತೆ ರಾಜೀವ್ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು. ಸುಂಕದಕಟ್ಟೆಯ ಕಟ್ಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಕುಡಿದು ಬಂದು ಮಕ್ಕಳಿಗೆ ಬೆದರಿಸುತ್ತಿದ್ದ. ಇದರಿಂದ ನೊಂದ ಮಕ್ಕಳು ರಾಜೀವ್ ಗಾಂಧಿ ವೃತ್ತದ ಆಂಜನೇಯ ದೇವಾಲಯದ ಹತ್ತಿರವಿದ್ದ ದೊಡ್ಡಪ್ಪನ ಮನೆಯಲ್ಲಿ ವಾಸಿಸುತ್ತಿದ್ದರು. ಮಕ್ಕಳು ಮನೆ ಬಿಟ್ಟು ಹೋಗಿರುವುದರಿಂದ ಆಕ್ರೋಶಗೊಂಡಿದ್ದ ತಂದೆ ಶಂಕರ್ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದ.
ಜ.2ರಂದು ರಾತ್ರಿ ದೊಡ್ಡಪ್ಪನ ಮನೆಯಲ್ಲಿ ಮಕ್ಕಳು ಮಲಗಿದ್ದ ಸಂದರ್ಭದಲ್ಲಿ ಇವರ ಮನೆ ಬಳಿ ಬಂದ ಶಂಕರ್ ಕಿಟಕಿಯಿಂದ ಮನೆಯ ಒಳಗೆ ಹಾಗೂ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಮನೆಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಮಕ್ಕಳು ಜೋರಾಗಿ ಕೂಗಿದ್ದರು. ಚೀರಾಟ ಕೇಳಿ ನೆರೆ-ಹೊರೆಯವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಮಕ್ಕಳನ್ನು ರಕ್ಷಿಸಿದ್ದಾರೆ.
ಮಗಳು ಮನೆ ಬಿಟ್ಟು ಹೋಗಿ ದೊಡ್ಡಪ್ಪನ ಮನೆಯಲ್ಲಿ ನೆಲೆಸಿದ್ದಕ್ಕೆ ಆಕ್ರೋಶಗೊಂಡು ಶಂಕರ್ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.