ಮಳೆ ಬಂದರೆ ಕೆರೆಯಾಗುವ ನವುಲೆ ಕ್ರೀಡಾಂಗಣ
ಮಳೆ ಬಂದರೆ ಕೆರೆಯಾಗುವ ನವುಲೆ ಕ್ರೀಡಾಂಗಣ....!
ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದ ಮಾದರಿಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ದ ನವುಲೆಯ ಕೆ ಎಸ್ ಸಿ ಎ ಕ್ರೀಡಾಂಗಣ ಮಳೆ ಬಂದರೆ ಮಾತ್ರ ಕೆರೆಯಂತೆ ಗೋಚರಿಸುತ್ತದೆ.
ಕ್ರೀಡಾಂಗಣ ನಿರ್ಮಾಣವಾಗಿ ನಾಲ್ಕು ವರ್ಷವಾಗಿದ್ದು ಎರಡು ಬಾರಿ ಮಳೆಗೆ ಮುಳುಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಕೆಎಸ್‌ಸಿಎ ಸಿದ್ಧತೆ ಮಾಡಿಕೊಂಡಿದೆ. ಫೆಬ್ರವರಿಯಲ್ಲಿ ನಡೆಯುವ ರಣಜಿ ಪಂದ್ಯದ ನಂತರ ಕಾಮಗಾರಿ ಆರಂಭವಾಗಲಿದೆ.
ಈ ಮೈದಾನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲು ಯೋಗ್ಯವಾಗಿದೆ. ಈಗಾಗಲೇ ರಣಜಿ, ಅಂಡರ್ 19, ಅಂಡರ್ 21, ವಲಯ ಮಟ್ಟದ ಪಂದ್ಯಗಳು ನಡೆಯುತ್ತಿವೆ. ಆದರೆ ಮಳೆಗಾಲದಲ್ಲಿ ನೀರು ತುಂಬಿ ಕೆರೆಯಂತಾಗುವ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಹಿನ್ನಡೆಯಾಗಿದೆ.
ನೀರು ಹೊರ ಹಾಕಲು ವ್ಯವಸ್ಥೆ,ಮಳೆ ನೀರು ಹೊರ ಹೋಗಲು ಪ್ರಸ್ತುತ ಆರು ಇಂಚು ಅಗಲದ ಪೈಪ್‌ಗ್ಳಿವೆ. ಆದರೆ ಮಳೆ ಅಬ್ಬರ ಜೋರಾದರೆ ಮೂರು ಅಡಿ ನೀರು ನಿಲ್ಲುತ್ತದೆ. ಮೈದಾನದಲ್ಲಿ ತುಂಬಿಕೊಳ್ಳುವ ನೀರು ಹೊರ ಹೋಗುವ ಪೈಪ್‌ಲೈನ್ ಪ್ರಮಾಣ ಕಡಿಮೆ ಇರುವುದರಿಂದ ಮೈದಾನ ಕೆರೆಯಂತೆ ಕಾಣುತ್ತದೆ. ಇದಕ್ಕೆ ಪರಿಹಾರವಾಗಿ ದೊಡ್ಡ ಪೈಪ್‌ಗ್ಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಸೂಚಿಸಿದ್ದಾರೆ.
ಈ ವರ್ಷ ಇಂಡಿಯಾ “ಎ’ ತಂಡದ ಪಂದ್ಯಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲು ಬಿಸಿಸಿಐಗೆ ಮನವಿ ಮಾಡಲಾಗಿದೆ. ಪಂದ್ಯ ಹಾಗೂ ಆಟಗಾರರಿಗೆ ಬೇಕಾದ ಸೌಕರ್ಯಕ್ಕೆ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಮೆಟ್ರೋಪಾಲಿಟನ್ ಸಿಟಿಗೆ ಸೀಮಿತವಾಗಿದೆ. ಅದನ್ನು ಶಿವಮೊಗ್ಗಕ್ಕೆ ತರುವ ಎಲ್ಲ ಪ್ರಯತ್ನ ಮಾಡಲಾಗುವುದು. ವಿಮಾನ ನಿಲ್ದಾಣ ಪೂರ್ಣಗೊಂಡರೆ ಆ ಕನಸು ಈಡೇರಲಿದೆ ಎಂದು ಕೆಎಸ್ ಸಿಎ,ವಲಯ ಸಂಚಾಲಕ ಡಿ ಎಸ್ ಅರುಣ್ ಹೇಳಿದ್ದಾರೆ.