ಇಂದು ಮಂಡನೆಯಾದ ಕೇಂದ್ರ ಬಜೆಟ್ : ಆದಾಯ ತೆರಿಗೆ ಮಿತಿ ಹೆಚ್ಚಳ : ವಿತ್ತೀಯ ಕೊರತೆ ಒಪ್ಪಿಕೊಂಡ ಸರ್ಕಾರ.

ನವದೆಹಲಿ : ಬಹು ನಿರೀಕ್ಷಿತ ಮೋದಿ 2.0 ಸರ್ಕಾರದ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಇಂದು ಮಂಡಿಸಿದರು. ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿರುವ ಈ ಸಮಯದಲ್ಲಿ ಕೇಂದ್ರದ ಬಜೆಟ್ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕೊನೆಗೂ ಇಂದು ಬಜೆಟ್ ಮಂಡನೆಯಾಗಿದ್ದು ಜನರು ಬಜೆಟ್ ಕುರಿತು ತಮ್ಮದೇ ಆದ ವ್ಯಾಖ್ಯಾನ  ಮಾಡುತ್ತಿದ್ದಾರೆ.


ಸಂಸತ್ ನಲ್ಲಿ ಸುಧೀರ್ಘ 2 .45 ಗಂಟೆ ಬಜೆಟ್ ಪ್ರತಿಯನ್ನು ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಓದುವ ಮೂಲಕ ಅತಿ ಹೆಚ್ಚು ಸಮಯ ಬಜೆಟ್ ನ್ನು ಓದಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮಧ್ಯೆ ಧೀರ್ಘ ಸಮಯ ಬಜೆಟ್ ಪ್ರತಿ ಓದಿದ ಕಾರಣ ನಿರ್ಮಲಾ ಸೀತಾರಾಮನ್ ಆರೋಗ್ಯದಲ್ಲಿ ಏರುಪೇರು ಕಂಡು ಬಂತು. ಕೊನೆಗೆ ಇನ್ನು ಎರಡು ಪುಟಗಳು ಬಾಕಿ ಇರುವಂತೆ ತಮ್ಮ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದರು.

ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳ....

ನಿರಿಕ್ಷೇಯಂತೆ ಈ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಸರ್ಕಾರದ ನೂತನ ಬಜೆಟ್ ನ ಪ್ರಕಾರ ಆದಾಯ ತೆರಿಗೆ ಸ್ಲ್ಯಾಬ್ ಗಳು ಈ ಕೆಳಗಿನಂತಿವೆ.

0 - 2.5 ಲಕ್ಷ  ಆದಾಯಕ್ಕೇ ಯಾವುದೇ ತೆರಿಗೆ ಇಲ್ಲಾ.

2.5 - 5 ಲಕ್ಷ ಆದಾಯಕ್ಕೆ 5 % ತೆರಿಗೆ ವಿಧಿಸಲಾಗಿದೆ.     ಆದರೆ ನಿಮ್ಮ ಆದಾಯ 5 ಲಕ್ಷಕ್ಕೆ ಸೀಮಿತವಾಗಿದ್ದರೆ, 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87 A ಅಡಿಯಲ್ಲಿ ನಿಮಗೆ ತೆರಿಗೆ ವಿನಾಯತಿ ಕೊಡಲಾಗುತ್ತದೆ.

5 - 7.5 ಲಕ್ಷ ಆದಾಯಕ್ಕೆ ಈ ಮೊದಲು 20% ತೆರಿಗೆ ವಿಧಿಸಲಾಗುತಿತ್ತು. ಈಗ ಆ ತೆರಿಗೆಯನ್ನು 10% ಗೆ ಇಳಿಸಲಾಗಿದೆ.

7.5 - 10 ಲಕ್ಷ ಆದಾಯಕ್ಕೆ ಈ ಮೊದಲಿದ್ದ 20% ತೆರಿಗೆಯನ್ನು 15 % ಗೆ ಇಳಿಕೆ ಮಾಡಲಾಗಿದೆ.

10 - 12.5 ಲಕ್ಷ ಆದಾಯಕ್ಕೆ ಈ ಮೊದಲಿದ್ದ 30 % ತೆರಿಗೆಯನ್ನು 20 % ಗೆ ಹಾಗೂ 12.5 - 15 ಲಕ್ಷ ಆದಾಯಕ್ಕೆ 25 % ಗೆ ಇಳಿಸಲಾಗಿದೆ.

ಇನ್ನು 15 ಲಕ್ಷಕ್ಕೂ ಅಧಿಕ ವಾರ್ಷಿಕ ಆದಾಯವಿದ್ದರೆ ಈ ಮೊದಲು 30 % ತೆರಿಗೆಯನ್ನು ವಿಧಿಸಲಾಗುತಿದ್ದು , ಈ ಬಜೆಟ್ ನಲ್ಲೂ ಅದನ್ನೇ ಮುಂದುವರಿಸಲಾಗಿದೆ.

ಈ ಹೊಸ ತೆರಿಗೆ ನಿಯಮಗಳು ಜನರಿಗೆ ಐಚ್ಛಿಕವಾಗಿದ್ದು, ಜನರು ತಮ್ಮ ಆದಾಯ ತೆರಿಗೆಯನ್ನು ಹೊಸ ನಿಯಮಾವಳಿಗಳ ಅಡಿಯಲ್ಲಿ ಪಾವತಿಸಬಹುದು ಅಥವಾ ಈ ಮೊದಲಿದ್ದ ನಿಯಮಾವಳಿಗಳ ಅಡಿಯಲ್ಲೂ ಪಾವತಿಸಬಹುದು. ಈ ಆಯ್ಕೆಯನ್ನು ಜನರಿಗೆ ಬಿಡಲಾಗಿದೆ.

ವಿತ್ತೀಯ ಕೊರತೆ ಒಪ್ಪಿಕೊಂಡ ಸರ್ಕಾರ...
ಇನ್ನು ಈ ಬಜೆಟ್ ನಲ್ಲಿ ವಿತ್ತೀಯ ಕೊರತೆ 3.2 % ನಿಂದ 3.8 % ಗೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.ಈ ಮೂಲಕ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು ಸರ್ಕಾರದ ಆದಾಯ ಗಳಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.