ಕೊರೊನಾ ಲಾಕ್ ಡೌನ್ : ಕುಡುಕರ ಕೌಂಟ್ ಡೌನ್

ಕಿಲ್ಲರ್ ಕೊರೊನಾ ಅಟ್ಟಹಾಸದಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಇಂದಿಗೆ 25 ದಿನಗಳು ಕಳೆದಿವೆ. ಪ್ರತಿಯೊಬ್ಬರು ಈ ಲಾಕ್ ಡೌನ್ ಆದಷ್ಟು ಬೇಗ ಮುಗಿಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಎಲ್ಲರೂ ಈ ಲಾಕ್ ಡೌನ್ ನಿಂದಾಗಿ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಹ ಸಾಧ್ಯವಾದಷ್ಟು ಮಟ್ಟಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಆದರೆ ಆ ಒಂದು ವರ್ಗದ ಜನರ ಸಂಕಷ್ಟ ಪರಿಹರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಅವರ ಕಷ್ಟಗಳು ಚರ್ಚೆಯಾಗುತ್ತೀವೆಯಾದರೂ ಅವರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.ಯಾರವರು ಅಂತೀರಾ..ಅವರೇ ಮದ್ಯಪ್ರಿಯರು.

ಯೆಸ್.......ಕುಡಿಯೋದೆ ನಮ್ಮ ವೀಕ್ನೆಸ್ಸು ಎಂದು ಒಪ್ಪಿಕೊಳ್ಳುತ್ತಲೇ ಮದ್ಯ ಮಾರಾಟ ಆರಂಭಿಸುವಂತೆ ಮದ್ಯಪ್ರಿಯರು ಸರ್ಕಾರಕ್ಕೆ ಪರಿಪರಿಯಾಗಿ ಬೇಡಿಕೋಳ್ಳುತ್ತಿದ್ದಾರೆ. ನಾವು ಸಾಮಾಜಿಕ ಅಂತರ ಕಾಪಡ್ಕೋತಿವಿ, ಬೇಕಾದ್ರೆ ಆರು ಅಡಿ ದೂರ ನಿಂತು ಎಣ್ಣೆ ಖರೀದಿ ಮಾಡ್ತೀವಿ ದಯವಿಟ್ಟು ಮದ್ಯದಂಗಡಿ
ತೆರೆಯುವಂತೆ ಮನವಿ ಮಾಡಿಕೊಳ್ತಿದ್ದಾರೆ. ಮದ್ಯದಂಗಡಿ ತೆರೆಸಲು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಮನವಿ ಮಾಡೊದ್ರಿಂದ ಹಿಡಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಪತ್ರ ಬರೆಯುವ ವರೆಗೆ ಎಲ್ಲಾ ಮಾರ್ಗಗಳಲ್ಲಿ ತಮ್ಮ ಅವಿರತ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ಸರ್ಕಾರ ಮಾತ್ರ ಕುಡುಕರ ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ.

ಮಾರ್ಚ್ 24 ರಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದಾಗ ಕುಡುಕರು ಅಕ್ಷರಶಃ ಕಂಗೆಟ್ಟು ಹೋಗಿದ್ದರು.ಮರುದಿನದಿಂದಲೇ ಮದ್ಯಕ್ಕಾಗಿ ತಮ್ಮ ಹುಡುಕಾಟ ಆರಂಭಿಸಿದರು. ಗೊತ್ತಿರೊರಿಗೆಲ್ಲಾ ಫೋನ್ ಮಾಡಿ ಎಲ್ಲಾದರೂ ಎಣ್ಣೆ ಸಿಗುತ್ತಾ ಅಂತಾ ಕೆಳತೊಡಗಿದರು. ಕೊನೆಗೆ ಎಲ್ಲೂ ಎಣ್ಣೆ ಸಿಗೋದಿಲ್ಲ, ಎಣ್ಣೆ ಬೇಕು ಅಂದ್ರೆ ಲಾಕ್ ಡೌನ್ ಮುಗಿಯೋವರೆಗೂ ಕಾಯಲೇಬೇಕು ಅಂತಾ ಗೊತ್ತಾದ ಮೇಲೆ ಲಾಕ್ ಡೌನ್ ದಿನಗಳನ್ನು ಕೌಂಟ್ ಡೌನ್ ಮಾಡಲು ಆರಂಭಿಸಿದರು.

 ಇನ್ನೇನು 21 ದಿನಗಳ ಲಾಕ್ ಡೌನ್ ಮುಗಿಯುವ ದಿನ ಹತ್ತಿರವಾಗುತ್ತಿದ್ಡಂತೇ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದರು. ಇಷ್ಟು ದಿವಸಗಳ ತಮ್ಮ ಉಪವಾಸ ಮುಗಿಯಲಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಮದ್ಯದಂಗಡಿ ಓಪನ್ ಆಗುತಿದ್ಡಂತೇ ಎಣ್ಣೆಯನ್ನು ಫುಲ್ ಸ್ಟಾಕ್ ಮಾಡಿಕೊಳ್ಳುವ ಪ್ಲಾನ್ ಮಾಡುತ್ತಿದ್ದರು. ಆದರೆ ಎಣ್ಣೆಪ್ರಿಯರ ಪ್ಲ್ಯಾನ್  ತಲೆಕೆಳಗೆ ಮಾಡಿದ ಪ್ರಧಾನಿ ಮೋದಿ ದೇಶದಲ್ಲಿ 19 ದಿನಗಳ ಕಾಲ ಎರಡನೇ ಹಂತದ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಕುಡುಕರ ಕೌಂಟ್ ಡೌನ್ ಮತ್ತೇ ಮೊದಲಿನಿಂದ ಆರಂಭವಾಗಿದೆ.