ಹೊಸ ತಲೆಮಾರಿಗೆ ಹಳೆಯ ರಾಮಾಯಣ...!

ಅದೆಷ್ಟೇ ತಲೆಮಾರುಗಳು ಬಂದರೂ ಭಾರತೀಯರಿಗೆ ರಾಮಾಯಣದ ಮೇಲೆ ಇರುವ ಆಸಕ್ತಿ, ವಾತ್ಸಲ್ಯ ಕಡಿಮೆಯಾಗುವುದಿಲ್ಲ. ಅದರಲ್ಲೂ 1987ರಲ್ಲಿ ಡಿಡಿ ನ್ಯಾಷನಲ್ ನಲ್ಲಿ  ಪ್ರದರ್ಶನಗೊಂಡಿದ್ದ ರಾಮಾನಂದ ಸಾಗರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ರಾಮಾಯಣ' ಧಾರಾವಾಹಿಯು ಅಪಾರ ಜನಪ್ರಿಯತೆ ಗಳಿಸಿತ್ತು. 

ಇದೀಗ ಲಾಕ್ ಡೌನ್ ಸಮಯದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ 33ವರ್ಷಗಳು ನಂತರ ಮರು ಪ್ರಸಾರ ಆಗುತ್ತಿರುವ ಡಿಡಿ ನ್ಯಾಷನಲ್ ನ 'ರಾಮಾಯಣ', ನೂರಾರು ಚಾನೆಲ್ ಗಳು, ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಕಾರ್ಯಕ್ರಮಗಳನಡುವೆಯೂ,
ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ  ಎಂಬುದಕ್ಕೆ ನಿದರ್ಶನವೇ, ಇಂದು 'ರಾಮಾಯಣ' ಟಿ.ಆರ್.ಪಿ ಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿರುವುದು.

ನಾನು ಹುಟ್ಟುವುದಕ್ಕೂ ಮುನ್ನವೆ ಪ್ರದರ್ಶನಗೊಂಡಿದ್ದ ರಾಮಾಯಣ, 3 ದಶಕಗಳು ಕಳೆದರೂ ಪ್ರೇಕ್ಷಕರ ಮೇಲಿನ ತನ್ನ ಪ್ರಬಲವಾದ ಪ್ರಭಾವವನ್ನು ಕೊಂಚವೂ ಕಳೆದುಕೊಂಡಿಲ್ಲ. ರಾಮಾಯಣದ ಮರು ಪ್ರಸಾರದ ವಿಷಯ ಕೇಳುತ್ತಲೇ ನನಗೂ ಅದನ್ನು ನೋಡಲು ಕುತೂಹಲ ಹೆಚ್ಚಾಯಿತು. ಈ ಪ್ರದರ್ಶನವು ಇಷ್ಟೊಂದು ಮನಮುಟ್ಟುವ ಭಾವನೆಗಳಿಂದ ಕೂಡಿರುತ್ತದೆ ಎಂದು ನಾನು ಭಾವಿಸಿರಲಿಲ್ಲ.  

ಅತ್ಯಂತ ಸರಳ ಹಾಗೂ ಸುಂದರ ಸಂಭಾಷಣೆ ಹೊಂದಿರುವ ಈ ರಾಮಾಯಣ ನಮಗೆ ಬದುಕಿನ ಮೌಲ್ಯಗಳನ್ನು, ರಾಮನ ತತ್ವಗಳನ್ನು ಅತಿ ಸುಲಭವಾಗಿ ಹಾಗೂ ಮನಸ್ಸಿಗೆ ನಾಟುವಂತೆ ಅರ್ಥ ಮಾಡಿಸುತ್ತದೆ. ಇದು ನಾನು ನೋಡಿದ ಅತ್ಯುತ್ತಮ ಸರಣಿಗಳಲ್ಲಿ ಒಂದಾಗಿದೆ.

        "ರಾಮಾಯಣ": ಮಹಾಕಾವ್ಯದ ಮಹತ್ವ....

ರಾಮನ ಜೀವನದಲ್ಲಿ ಬರುವ ಎಲ್ಲಾ ವಿಪತ್ತುಗಳ ಸನ್ನಿವೇಶಗಳಲ್ಲಿ, ತಾನು ಕೊಂಚವೂ ಸಹನೆ ಕಳೆದುಕೊಳ್ಳದೆ, ಸತ್ಯಸಂಧತೆಯಿಂದ, ತನ್ನ ಧರ್ಮ, ಕರ್ತವ್ಯಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ತರದೆ ಹೇಗೆ
ಮನೋಹರವಾಗಿ ನಡೆದುಕೊಳ್ಳುತ್ತಾ, ಎಲ್ಲ ವಿಪತ್ತುಗಳನ್ನು ಎದುರಿಸುತ್ತಾನೆ ಎಂಬುದೇ ಈ ಮಹಾಕಾವ್ಯದ ಮಹತ್ವ.

      ಸಮಾನತೆ ಮೆರೆದ ರಾಮ: ಜಾತಿಗಿಂತ ನೀತಿ ಮೇಲು..

ಇದು ಯಾವುದೇ ಜಾತಿ, ಕುಲಕ್ಕೆ  ಮಾತ್ರ ಸೀಮಿತವಾದದ್ದಲ್ಲ. ಇದೊಂದು ಬದುಕಿನ ಪಾಠವೆಂದೇ ಹೇಳಬಹುದು. ಇದು ಸಂಬಂಧಗಳ ಮಹತ್ವವನ್ನು ಪರಿಚಯಿಸುವ ಮಹಾಕಾವ್ಯವಾಗಿದೆ. ರಾಮಾಯಣದಲ್ಲಿ ರಾಮನು ಯಾವುದೇ ಜಾತಿ, ಪ್ರಾಣಿ, ಪಕ್ಷಿಗಳ ನಡುವೆ ಬೇಧ ಭಾವ ಮಾಡದೆ ಸಮಾನತೆಯಿಂದ ನೋಡುತ್ತಾನೆ. ವಾನರ ಕುಲದ ಸುಗ್ರೀವ, ರಾಕ್ಷಸ ಕುಲದ ವಿಭೀಷಣ ಇವರಿಗೂ ರಾಮ ಮಿತ್ರ ಸ್ಥಾನ ಕೊಟ್ಟು, ತನ್ನ ಮಿತ್ರ ಧರ್ಮವನ್ನು ಪಾಲಿಸುತ್ತಾನೆ.

                       ಶ್ರೀರಾಮನ ವ್ಯಕ್ತಿತ್ವ...

ತ್ಯಾಗ, ಪ್ರೀತಿ, ಕರ್ತವ್ಯ, ಸಹನೆ, ಮತ್ತು ಅವಶ್ಯವಿದ್ದಾಗ ಮಾತ್ರ ಕೋಪ ಪ್ರದರ್ಶಿಸುವ ವ್ಯಕ್ತಿತ್ವ ರಾಮನದ್ದು. ಕೋಪವನ್ನೇ ಕಿರೀಟದಂತೆ ಭಾವಿಸಿರುವ ಈಗಿನ ಪೀಳಿಗೆಯವರು ರಾಮನನ್ನು ನೋಡಿ ಕಲಿಯುವುದು ಬಹಳಷ್ಟಿದೆ. 
ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನರನ್ನು ನೋಡಿದರೆ ಸಹೋದರರೆಂದರೆ ಹೀಗಿರಬೇಕು ಎನಿಸುತ್ತದೆ.  
ಜನ್ಮ ಕೊಟ್ಟ ಮಾತಾ-ಪಿತಾ, ವಿದ್ಯೆಕೊಟ್ಟ ಗುರು ಹಾಗೂ ತನ್ನ ಜನ್ಮಭೂಮಿ ಋುಣವನ್ನು ತೀರಿಸುವುದರ ಮೌಲ್ಯವನ್ನು ರಾಮಾಯಣ ತಿಳಿಸಿಕೊಡುತ್ತದೆ.

          ರಾಮಾಯಣದ ಪಾತ್ರಗಳ ಸೊಬಗು...

ಇಂಥದ್ದೊಂದು ಅತ್ಯುತ್ತಮ ಭಾರತೀಯ ಮಹಾಕಾವ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿರುವ 1987ರ ರಾಮಾಯಣ ತಂಡಕ್ಕೆ,   ಅದರಲ್ಲಿ ನಟಿಸಿರುವ ಪಾತ್ರಗಳ ನಟನಾ ಕೌಶಲ್ಯಗಳಿಗೆ ಸರಿಸಾಟಿಯೇ ಇಲ್ಲ. ಇದರಲ್ಲಿ ಬರುವ ಪಾತ್ರಗಳು ಬಹುತೇಕ ಪರಿಪೂರ್ಣತೆಯಿಂದ ನಿರ್ವಹಿಸಿದ್ದಾರೆ. ಅರುಣ್ ಗೋವಿಲ್, ದೀಪಿಕಾ ಮತ್ತು ಸುನೀಲ್ ಅಭಿನಯಿಸಿರುವ ರಾಮ, ಸೀತೆ ಹಾಗೂ ಲಕ್ಷ್ಮಣ ಪಾತ್ರಗಳನ್ನು ನಾನು ಮರೆಯುವುದಕ್ಕೆ ಸಾಧ್ಯವಿಲ್ಲ.

ದಾರಾ ಸಿಂಗ್ ಅಭಿನಯಿಸಿರುವ ಹನುಮಾನ್ ಪಾತ್ರವನ್ನು ಪ್ರೀತಿಸದೇ ಇರಲಾಗದು. ಹನುಮಾನ್ ಪಾತ್ರದ ಮುಗ್ಧತೆ, ಆತನ ಶಕ್ತಿ, ರಾಮನ ಮೇಲಿನ ಅಪಾರ ಭಕ್ತಿ ನಮ್ಮ ಮನ ಕಲಿಕಿಸುತ್ತದೆ. 

ಇನ್ನು ರಾಮನಿಗೆ ಸಂಬಂಧಪಟ್ಟ ಪಾತ್ರಗಳಷ್ಟೇ ಅಲ್ಲದೆ ರಾವಣನಿಗೆ ಸಂಬಂಧಪಟ್ಟ ಕೆಲವು ಪಾತ್ರಗಳು ಸಹ ನಮ್ಮನ್ನು ಭಾವನಾತ್ಮಕವಾಗಿಸುತ್ತವೆ. ಅದರಲ್ಲೂ ಕುಂಭಕರ್ಣನ ಪಾತ್ರ ನಿಮ್ಮ ಕಣ್ಣಲ್ಲಿ ನೀರು ತರದೇ ಇರಲಾರದು. ರಾವಣನ ಮಗನದ ಮೇಘನಾದ ಪಾತ್ರದ ಅಭಿನಯ ಪ್ರಶಂಸನೀಯ.

     ಎಲ್ಲರೂ ನೋಡಲೇಬೇಕಾದ ರಾಮಾಯಣ...! 

ಎಲ್ಲ ಪೀಳಿಗೆಯವರು ತಮ್ಮ ಜೀವನಾವಧಿಯಲ್ಲಿ ಒಮ್ಮೆಯಾದರೂ ರಾಮಾಯಣವನ್ನು ನೋಡಲೇಬೇಕು. ಈ ಪ್ರದರ್ಶನವನ್ನು ಮೊದಲ ಬಾರಿಗೆ ನೋಡುತ್ತಿರುವ ನನಗೆ, ಇದೊಂದು ಜೀವಮಾನದ ಒಂದು ಅವಕಾಶ ಎಂದೇ ಅನಿಸುತ್ತದೆ.