ನಿಗೂಢ ಲೋಕದ ಚಿದಂಬರ ರಹಸ್ಯ...!

ತುಂಬಾ ದಿನಗಳಿಂದ ಓದಬೇಕೆಂದುಕೊಂಡಿದ್ದ ಕಾದಂಬರಿಗೆ ಒಳ್ಳೆ ಸಮಯ ಒದಗಿ ಬಂದದ್ದು ಈ ಲಾಕ್ ಡೌನ್ ಸಮಯದಲ್ಲಿ, ಚಿದಂಬರ ರಹಸ್ಯ ಎಂಬ ಶೀರ್ಷಿಕೆ ನೋಡಿ ಕಾದಂಬರಿಯ ಬಗ್ಗೆ ನನ್ನದೇ ಆದ ಸುಪ್ತ ಕತೆಯೊಂದು ಅಗೋಚರವಾಗಿ ಮನಸಿನಲ್ಲಿ ಹೆಣೆದುಕೊಂಡು ಬಿಟ್ಟಿತ್ತು. ಕಾದಂಬರಿ ಓದಿದ ನಂತರ ನನ್ನ ಕಲ್ಪನೆಗೂ ತೇಜಸ್ವಿಯವರು ಹೆಣೆದ ಕತೆಗೂ ಅಜ ಗಜಾಂತರವಿದೆ ಎಂಬ ಅರಿವಾಯಿತು.

ಏಲಕ್ಕಿ ಬೆಳೆಗೆ ದೇಶದಾಚೆಗೂ ಖ್ಯಾತಿ ಪಡೆದ ಮಲೆನಾಡಿನ ಕೆಸರೂರು ಗ್ರಾಮದಲ್ಲಿ ನಡೆಯುವ ಘಟನೆಗಳು ಈ ಕಾದಂಬರಿಯ ಕಥಾವಸ್ತು.  ಆರಂಭವಾಗುವುದೇ “ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪಾ” ಎಂಬ ಸಾಲಿನೊಂದಿಗೆ. ಕೆಸರೂರಿನ ಕಾಲೇಜು ಯುವಕರಾದ ಇಂಗ್ಲೀಷ್ ಗೌಡ, ರಮೇಶ, ಅಂಗಾರ, ಚಂದ್ರ, ರಫಿ ಈ ಮಿತ್ರಮಹಾಶಯರೆಲ್ಲಾ ಯಾವ ಕಾರಣಕ್ಕೆ ಕ್ರಾಂತಿ ಮಾಡ ಬಯಸುತ್ತಾರೆಂಬುವುದನ್ನು ತಿಳಿದರೆ ನಕ್ಕು ಸುಸ್ತಾಗುತ್ತೀರಿ.

ಡಾ.ರಾಮಚಂದ್ರ, ಸಿದ್ದಪ್ಪ, ಹೆಗ್ಡೆ, ಮಹಮದ್, ಸಂಶೋಧನಾ ಕೇಂದ್ರ ಮುಖ್ಯಸ್ಥ  ಪಾಟೀಲರು,  ಇವರೆಲ್ಲರ ನಡುವೆ ಏಲಕ್ಕಿ ಬೋರ್ಡಿನ ಇಂಟೆಲಿಜೆನ್ಸ್ ಎಂದು ಬರುವ ಆಗುಂತಕ ಅಂಗಾಡಿ, ಕ್ಷೀಣಿಸುತ್ತಿರುವ ಏಲಕ್ಕಿ ಬೆಳೆಯ ಬಗ್ಗೆ ವರದಿ ತಯಾರಿಸಲು ಬಂದು ಯಾವೆಲ್ಲಾ ವಿಷಯಗಳನ್ನು ಕೆದಕುತ್ತಾ ಹೋಗುತ್ತಾರೆ. 

ಕ್ವಿಂಟಲ್ ಗಟ್ಟಲೆ ಬೆಳೆ ಕೊಡಬಹುದಾದ ಕೆಸರೂರು ಬ್ರೀಗೆಡನ್ನು ಸಂಶೋಧಿಸ ಹೊರಟ ಜೋಗಿಹಾಳರ ಕೊಲೆ ಎಲ್ಲಾ ಸಮಸ್ಯೆಗಳಿಗೂ ತಳುಕು ಹಾಕಿಕೊಳ್ಳುತ್ತದೆ. ಜೋಗಿಹಾಳರ ಕೊಲೆಯ ನಂತರ ಅವರ ಸಂಶೋಧನೆಯನ್ನು ಕೈಗೆತ್ತಿಕೊಂಡಿದ್ದ ಪಾಟೀಲರಿಗೆ ಬರುವ ಕೊಲೆ ಬೆದರಿಕೆ. ಟನ್ನುಗಟ್ಟಲೆ ಬೆಳೆ ಬರುವ ಏಲಕ್ಕಿಯ ಪ್ರಭೇದ ಸಾಗರೋಪಾದಿಯಾಗಿ ಬೆಳೆದ ಲಂಟಾನ ಬಳ್ಳಿಯೊಳಗೆ ಭದ್ರವಾಗಿರುತ್ತದೆ. ಈ ಮಧ್ಯೆ ಪ್ರತಿ ಘಟನೆಗಳನ್ನು ಬೆಸೆಯುವ ಕಥೆಯೊಂದನ್ನು ಸೃಷ್ಟಿಸಿ, ಅದರ ಆಧಾರದ ಮೇಲೆ ಸಾಕ್ಷ್ಯಗಳನ್ನು ಬೆನ್ನಟ್ಟುವ ಅಂಗಾಡಿ, ಜಯರಾಂ, ರಾಮಚಂದ್ರರು. ಮನುಷ್ಯ ಪ್ರಕೃತಿಯನ್ನು ಹಾಳುಗೆಡವಿದಷ್ಟೂ ಅದು, ತನ್ನದೇ ನಿಯಮದ ಮೂಲಕ ಅಸ್ತಿತ್ವ ಸಾಧಿಸುತ್ತಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೋಗುತ್ತದೆ ಎನ್ನುವ ಸತ್ಯ.

ಇದರ ಮಧ್ಯೆ ಕೆಸರೂರಿನ ಜಾತಿ ಧರ್ಮಗಳ ರಾಜಕೀಯ,ದೆವ್ವ, ಭೂತಗಳ ಮೂಢನಂಬಿಕೆ,ಇದನ್ನೇ ಬಳಸಿಕೊಂಡು ಲಾಭ ಪಡೆಯುವ ಮತ್ತೊಂದು ವರ್ಗ. ಕ್ರಾಂತಿಗಾಗಿ ಒಳಗೊಳಗೆ ಕುದಿಯುತ್ತಿರುವ ಜನಸಮೂಹಕ್ಕೆ ರಫಿ ಮತ್ತು ಜಯಂತಿಯ ಪ್ರೇಮ ಕ್ರಾಂತಿಯ ಎಲ್ಲೇ ಮೀರಿ ಹೇಗೆ ದೊಂಬಿಯಾಗುತ್ತದೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.