54.69ಲಕ್ಷ ಮೌಲ್ಯದ ಅಕ್ರಮ ಮಾದಕ ವಸ್ತುಗಳ ವಶ
ತುಮಕೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ವತಿಯಿಂದ ಕಳೆದ 3 ತಿಂಗಳಿಂದ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ 10 ಪ್ರಕರಣಗಳನ್ನು ದಾಖಲಿಸಿ 14ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಗಳಲ್ಲಿ 54.69 ಲಕ್ಷ ರೂಪಾಯಿಗಳ ಅಕ್ರಮ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತುಮಕೂರಿನ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣಗಳಲ್ಲಿ ಭಾಗಿಯಾಗಿರುವ ಒಂದು ಲಾರಿ, 7 ದ್ವಿಚಕ್ರ ವಾಹನ, ಒಂದು ಆಟೋರಿಕ್ಷಾ, ಒಂದು ಕೆ.ಜಿ. ಓಫಿಯಂ ಪೌಡರ್, 68 ಗಾಂಜಾ ಗಿಡಗಳು, 200 ಗ್ರಾಂ ಕೆನಾಬಿಸ್ ಲೀಫ್, 50 ಗ್ರಾಂ ಕೆನಾಬಿಸ್ ಸೀಡ್ಸ್, 26.170 ಕೆಜಿ ಗಾಂಜಾ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯಲ್ಲಿರುವ ಶಾಲಾ ಕಾಲೇಜುಗಳಿಗೆ ಇಲಾಖೆಯಿಂದ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅಬಕಾರಿ ಇಲಾಖೆಯ ಎನ್.ಡಿ.ಪಿ.ಎಸ್ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.