ಬೃಂದಾವನಾಸ್ತರಾದ ವಿಶ್ವ ಸಂತ ಪೇಜಾವರ ಶ್ರೀ....

ಬೆಂಗಳೂರು, ಡಿ.29: ಇಂದು ನಿಧನರಾದ ಉಡುಪಿಯ ಅಷ್ಟಮಠದ ಹಿರಿಯ ಯತಿ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿ(88)ಯ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಬೆಂಗಳೂರಿನ ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ನೆರವೇರಿಸಲಾಯಿತು.

ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಗಾ ಜಲದಿಂದ ಸ್ನಾನ ಮಾಡಿಸಿದ ಬಳಿಕ ಮಧ್ವ ಸಂಪ್ರದಾಯದಂತೆ ನಾಮ ಇಡಲಾಯಿತು. ಬಳಿಕ ಮುದ್ರೆ, ಅಕ್ಷತೆ, ಅಂಗಾರಕ, ತುಳಸಿ ವನಮಾಲೆ ಧಾರಣೆ ಮಾಡಿಸಲಾಯಿತು. ಬಳಿಕ ಕೃಷ್ಣ ಮಂದಿರದಲ್ಲಿ ದೇವರಿಗೆ ಆರತಿ ಬೆಳಗಿಸಿ, 5 5 ಅಳತೆಯ ಗುಂಡಿಯಲ್ಲಿ ಪದ್ಮಾಸನದಲ್ಲಿ ಕೂತಿರುವಂತೆ ಪಾರ್ಥಿವ ಶರೀರವನ್ನು ಇರಿಸಲಾಯಿತು.

ಪಂಚಗವ್ಯ, ಪ್ರೋಕ್ಷಣೆ, ಗೋಮಯ ಲೇಪನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 5 ಕಲಶಗಳಿಗೆ ಗಂಗಾ ಸನ್ನಿಧಾನ ಆವಾಹಿಸಿ ಅಭಿಷೇಕ ಮಾಡಲಾಯಿತು. ಜಪಾನುಷ್ಠಾನ ಸಾಧನಗಳನ್ನು ಪಾರ್ಥಿವ ಶರೀರದ ಮುಂದಿಡಲಾಯಿತು. ನಂತರ 5 ಪ್ರಮುಖ ದ್ರವ್ಯಗಳಾದ ಉಪ್ಪು, ಸಾಸಿವೆ, ಕರ್ಪುರ, ಕರಿಮೆಣಸು, ಹತ್ತಿ ಹಾಗೂ ನೇತ್ರಾವತಿ, ಕುಮಾರಧಾರ, ಗೋದಾವರಿ, ಗಂಗಾ ನದಿ, ಕಾವೇರಿ, ಕೃಷ್ಣ, ಸ್ವರ್ಣ, ಹೇಮಾವತಿ ನದಿಗಳ ಮರಳಿನಿಂದ ಮೃತ್ತಿಕ ಅಧಿವಾಸ ನಡೆಸಿ, ಬಳಿಕ ತಲೆಯ ಮೇಲೆ ಇಷ್ಟ ಸಾಲಿಗ್ರಾಮವಿಟ್ಟು ಸಮಾಧಿ ಮಾಡಲಾಯಿತು.