ವಿದ್ವತ್ ಸಭೆಯಲ್ಲಿ ಕಾಶಿ ಪಂಡಿತರನ್ನು ಸೋಲಿಸಿದ್ದ ವಿಶ್ವೇಶತೀರ್ಥ ಶ್ರೀಗಳು....

1951,  ಆಗ ಶ್ರೀಪಾದರಿಗೆ 30 ವರ್ಷ. ದಿಲ್ಲಿಯಲ್ಲಿ ವಿಶ್ವ ಕಲ್ಯಾಣ ಯಾಗದ ಸಂಭ್ರಮ. ಗುರು ವಿದ್ಯಾಮಾನ್ಯ ತೀರ್ಥರು ಏರ್ಪಡಿಸಿದ ಈ ಯಾಗದಲ್ಲಿ ಸಹಜವಾಗಿಯೇ ಶಿಷ್ಯ ವಿಶ್ವೇಶ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.

ಯಾಗದಲ್ಲೊಂದು ವಿದ್ವತ್ ಸಭೆ. ಕಾಶಿಯ ಪ್ರಖಾಂಡ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಆ ಸಭೆಯ ಮುಂದೆ ಒಂದು ಸಮಸ್ಯೆಯನ್ನಿಟ್ಟರು. ತರ್ಕಶಾಸ್ತ್ರದ ಅತ್ಯಂತ ಜಟಿಲವಾದ ಪ್ರಶ್ನೆ. ಪಂಡಿತರೆಲ್ಲ ಉತ್ತರ ಕಾಣದೆ ತತ್ತರಿಸಿದರು. ಉತ್ತರ ಸಿಗದೆ ಆ ದಿನ ಸಂದಿತು. ರಾಮಚಂದ್ರ ಶಾಸ್ತ್ರಿಗಳು ತನಗೆ ಸಾಟಿಯಿಲ್ಲ ಎಂದು ಬೀಗಿದರು. ಆ ಹಮ್ಮಿನಿಂದಲೇ ಶಾಸ್ತ್ರಿಗಳು ಮಾರನೆಯ ದಿನ ಸಭೆಗೆ ಆಗಮಿಸಿದರು. ಪೇಜಾವರ ಶ್ರೀಪಾದರು ಮುಂಜಾನೆಯ ಸಭೆಯಲ್ಲಿ ಆ ಸಮಸ್ಯೆಗೆ ಸೂಕ್ತ ಉತ್ತರ ನೀಡಿದರು. ಷಡಂಗರಿಗೆ ಅಚ್ಚರಿ ಅವರು ತೆಪ್ಪಗೆ ಶ್ರೀಪಾದರ ಕಾಲಿಗೆರಗಿದರು.