ರಾಧಿಕಾ ಬರ್ತಡೆಗೆ ಅಭಿಮಾನಿಗಳಲ್ಲಿ ಯಶ್ ವಿಶೇಷ ಮನವಿ..!

ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮಾರ್ಚ್ 7ರಂದು ರಾಧಿಕಾ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ರಾಧಿಕಾ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸುತ್ತಿದ್ದರು. ಆದರೆ ಈ ಬಾರಿ ಯಶ್ ಮನೆಯ ಬಳಿ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

ನಗರದಲ್ಲಿ ಗುರುವಾರ 'ಓಬೆರಾಯನ' ಕತೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, "ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ. ಈ ಬಾರಿ ಯಾವುದೇ ಆಚರಣೆ ಇಲ್ಲ. ಸಂಜೆ ನಾನು ಹಾಗೂ ರಾಧಿಕಾ ಒಟ್ಟಿಗೆ ಎಲ್ಲಿಯಾದರೂ ಹೋಗಿ ಕಾಲ ಕಳೆಯುತ್ತೇವೆ ಅಷ್ಟೇ" ಎಂದು ಯಶ್ ತಿಳಿಸಿದ್ದಾರೆ. 

ಇದೇ ವೇಳೆ ಕೊರೊನಾ ವೈರಸ್ ಬಗ್ಗೆ ಸಲಹೆ ನೀಡಿದ ಯಶ್, ನಾವು ಸ್ವಚ್ಛತೆ ಕಾಪಾಡಬೇಕು. ಎಲ್ಲರಿಗೂ ಶೇಕ್ ಹ್ಯಾಂಡ್ ಕೊಡುವ ಬದಲು ನಮ್ಮ ದೇಶದ ನಮಸ್ಕಾರ ಮಾಡಿ. ನಿಮಗೆ ಸ್ವಲ್ಪ ಆರೋಗ್ಯ ಹುಷಾರಿಲ್ಲ ಎಂದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ. ತುಂಬಾ ಜನ ಇರುವ ಕಡೆ ಯಾರು ಸೇರಬೇಡಿ ಎಂದು ಯಶ್ ಹೇಳಿದರು.