ಕಾರ್ ಅಪಘಾತದಿಂದ ಶಬಾನಾ ಅಜ್ಮಿ ಆಸ್ಪತ್ರೆಗೆ ದಾಖಲು; ಅವರ ಚೇತರಿಕೆ ಆಶಿಸಿ ಮೋದಿ ಟ್ವೀಟ್...
ಮುಂಬೈ: ಶನಿವಾರ ಮಧ್ಯಾಹ್ನ ಮುಂಬೈ-ಪುಣೆ ಹೆದ್ದಾರಿಯಲ್ಲಿ ಬಾಲಿವುಡ್ ನಟಿ ಶಬಾನಾ ಅಜ್ಮಿ ಪ್ರಯಾಣಿಸುತ್ತಿರುವ ಕಾರ್ ಅಪಘಾತಕ್ಕೊಳಗಾಗಿತ್ತು. ಕಾರ್ ಚಾಲಕನನ್ನು ಅಮ್ಲೆಶ್ ಯೋಗೇಂದ್ರ ಕಾಮತ್ ಎಂದು ಗುರುತಿಸಲಾಗಿದ್ದು, ಅಪಘಾತಕ್ಕೊಳಗಾದ ಲಾರಿಯ ಚಾಲಕ ರಾಜೇಶ್ ಪಾಂಡುರಂಗ ಶಿಂಧೆ ಅವರು ಶಬಾನಾ ಅಜ್ಮಿ ಅವರ ಕಾರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಾಲಕನ ರ್ಯಾಶ್ ಡ್ರೈವಿಂಗ್ (ಅತಿಯಾದ ವೇಗ)ನಿಂದಾಗಿ ಈ ಅಪಘಾತ ಸಂಭಿಸಿದೆ. ಪುಣೆ-ಮುಂಬೈ ಹೈ ವೇಯಲ್ಲಿ ಚಲಿಸುತ್ತಿದ್ದ ಲಾರಿಗೆ ಕಾರು ಗುದ್ದಿದೆ ಎಂದು ಎಫ್‍ಐಆರ್‍ನಲ್ಲಿ ದಾಖಲಿಸಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಶಬಾನಾ ಅಜ್ಮಿಯವರನ್ನು ತಕ್ಷಣವೇ ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಅಂಧೇರಿಯಲ್ಲಿನ ಕೋಕಿಲಾಬೆನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ವೈದ್ಯರು ಮಾಹಿತಿ ನೀಡಿ, ಅಜ್ಮಿಯವರ ತಲೆಗೆ ಪೆಟ್ಟು ಬಿದ್ದಿದೆ. ಅಲ್ಲದೆ ಬೆನ್ನು ಮೂಳೆಗೆ ಹಾನಿಯಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಶಬಾನಾ ಅಜ್ಮಿ ಪತಿ, ಸಾಹಿತಿ, ಜಾವೇದ್ ಅಖ್ತರ್ ಪ್ರತಿಕ್ರಿಯಿಸಿ, ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಅಪಘಾತ ಸುದ್ದಿ ತಿಳಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದರು.