ಕೊರೊನಾ ಲಾಕ್ ಡೌನ್ ಹಾಗೂ ಜನಜೀವನ : ಸಂಕಷ್ಟದಲ್ಲಿ ರೈತರು : ಆತಂಕದಲ್ಲಿ ವಿದ್ಯಾರ್ಥಿಗಳು : ಕಂಗೆಟ್ಟ ದಿನಗೂಲಿ ನೌಕರರು...

* ಕೊರೊನಾ ಲಾಕ್ ಡೌನ್ ಹಾಗೂ ಜನಜೀವನ.....

ಕೊರೊನಾ ಎಂಬ ಕ್ರೂರಿಯ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ ವಿಧಿಸಿ ಇಂದಿಗೆ ಹದಿನೇಳು  ದಿನಗಳು ಕಳೆದಿವೆ. ಮೋಸ್ಟ್ ಹ್ಯಾಪನಿಂಗ್ ಕಂಟ್ರಿ ಎಂದೇ ಕರೆಯಲ್ಪಡುವ ಭಾರತದಲ್ಲಿ ಲಾಕ್ ಡೌನ್ ವಿಧಿಸಿರುವುದು ಜನಜೀವನವನ್ನು ಸಂಪೂರ್ಣವಾಗಿ ಅಸ್ತ ವ್ಯಸ್ತ ಗೊಳಿಸಿದೆ. ಹಾಗದರೆ ಭಾರತದಲ್ಲಿ ಲಾಕ್ ಡೌನ್ ಜನರ ಜೀವನದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮ ಬೀರಿದೆ ನೋಡೋಣ ಬನ್ನಿ..

* ಬೀದಿಗೆ ಬಂತು ಸಾವಿರಾರು ಕುಟುಂಬಗಳ ಬದುಕು....

ಮಾರ್ಚ್ 24 ರಂದು ಪ್ರಧಾನಿ ಮೋದಿ ಡಿಢರ್ ಆಗಿ ದೇಶದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದರು. ಇದರಿಂದ ಹೊಟ್ಟೆಪಾಡಿಗಾಗಿ ಮಹಾನಗರಗಳಿಗೇ ವಲಸೆ ಹೋಗಿದ್ದ ಕುಟುಂಬಗಳಿಗೆ ವಾಪಸ್ ಊರಿಗೂ ಬರಲೂ ಆಗದೇ ಮಹಾನಗರಗಳಲ್ಲೇ ಇರಲು ಆಗದೇ ಅತಂತ್ರರಾಗಿದ್ದಾರೆ. ಅದೆಷ್ಟೋ ಕುಟುಂಬಗಳು ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ನಡೆದು ತಮ್ಮ ಊರು ಸೇರಲು ಪ್ರಯತ್ನ ಪಟ್ಟರಾದರೂ ಚೆಕ್ ಪೋಸ್ಟ್ ಗಳಲ್ಲಿ ಪೋಲಿಸರು ಅವರನ್ನು ತಡೆ ಹಿಡಿದರು. ಈ ರೀತಿಯಾಗಿ ಸಾವಿರಾರು ಕುಟುಂಬಗಳು ಇಂದು ರಸ್ತೆಯಲ್ಲೇ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.

* ಸಂಕಷ್ಟಕ್ಕೆ ಸಿಲುಕಿದ ರೈತಾಪಿ ವರ್ಗ....

ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಅತಿ ಹೆಚ್ಚು ಬಾಧಿತರಾದವರು ರೈತರು. ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿಸಲಾಗದೇ, ಕಟಾವು ಮಾಡಿಸಿದರೂ ಮಾರಕಟ್ಟೆಗೆ ಸಾಗಿಸಲಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮೊದಲೇ ಪ್ರವಾಹ ಹಾಗೂ ಬರಗಾಲಗಳಿಂದ ನಷ್ಟದಲ್ಲಿದ್ದ ಕೃಷಿ ಕ್ಷೇತ್ರಕ್ಕೆ ಕೊರೊನಾ ಲಾಕ್ ಡೌನ್ ಗಾಯದ ಮೇಲೆ ಬರೆ ಎಳೆದಂತಾಗಿದೆ.

* ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ ಬೀದಿ ಬದಿ ವ್ಯಾಪಾರಿಗಳು ಹಾಗೂ ದಿನಗೂಲಿ ನೌಕರರು....

ಲಾಕ್ ಡೌನ್ ಹೊಡೆತವನ್ನು ಶ್ರೀಮಂತರು, ಸರ್ಕಾರಿ ನೌಕರರು ಹಾಗೂ ಮಧ್ಯಮವರ್ಗ ಹೇಗೋ ಸಹಿಸಿಕೊಳ್ಳಬಹುದು. ಆದರೆ ಬೀದಿ ಬದಿ  ವ್ಯಾಪಾರಿಗಳಿಗೆ ಹಾಗೂ ದಿನಗೂಲಿ ನೌಕರರಿಗೆ ಆ ಶಕ್ತಿಯಿಲ್ಲ.. ತಮ್ಮ ಉಳಿತಾಯ ಈಗಾಗಲೇ ಕರಗುತ್ತ ಬಂದಿದೆ. ಒಂದು ವೇಳೆ ಲಾಕ್ ಡೌನ್ ವಿಸ್ತರಣೆಯಾದರೆ ಮುಂದಿನ ಜೀವನ ಹೇಗೆ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ.

* ವಿದ್ಯಾರ್ಥಿಗಳಿಗೆ ಕವಿದಿದೆ ಅನಿಶ್ಚಿತತೆಯ ಕಾರ್ಮೋಡ....

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರಿಕ್ಷೇ , ಹತ್ತನೇ ತರಗತಿ ಪರಿಕ್ಷೇ ಹಾಗೂ ನೀಟ್ ಸೇರಿದಂತೆ ಹಲಾವಾರು ಸ್ಪರ್ಧಾತ್ಮಕ ಪರಿಕ್ಷೆಗಳು ನಡೆಯಬೇಕಿವೆ.
ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಲಾಕ್ ಡೌನ್ ಯಾವಾಗ ಮುಗಿಯುತ್ತೆ, ಯಾವಾಗ ಪರಿಕ್ಷೆಗಳು ನಡೆಯುತ್ತವೆ ಎನ್ನುವ ಅನಿಶ್ಚಿತತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ವರ್ಷವಿಡಿ ಕಷ್ಟ ಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ಕೊರೊನಾ ಲಾಕ್ ಡೌನ್ ನಿಂದಾಗಿ ದೀರ್ಘ ರಜೆ ಸಿಕ್ಕಿದ್ದು,  ಓದಿನ ಲಯ ತಪ್ಪುವ ಆತಂಕ ಕಾಡುತ್ತಿದೆ.

* ತಟ್ಟುತ್ತಿದೆ ಬೆಲೆ ಏರಿಕೆ ಬಿಸಿ.......

ದೇಶಕ್ಕೆ  ದೇಶವೇ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಬಹುತೇಕ ದಿನಸಿ ಅಂಗಡಿಯ ಮಾಲೀಕರು ಹಾಗೂ ತರಕಾರಿ ವ್ಯಾಪಾರಸ್ಥರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದು , ಅಗತ್ಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನಲೆ ಜನರ ಆದಾಯ ಕುಸಿದಿರುವ ಸಮಯದಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಗುವುದರಿಂದ ಮಧ್ಯಮ ವರ್ಗ ಸಂಕಷ್ಟಕ್ಕೆ ಸಿಲುಕಿದೆ.

ಒಟ್ಟಾರೆ ಕೊರೊನಾ ಎಲ್ಲ ಕ್ಷೇತ್ರದ ಎಲ್ಲಾ ಜನರ ಜೀವನದ ಮೇಲೆ ತನ್ನ ಪರಿಣಾಮ ಬೀರಿದ್ದು , ಜನಜೀವನ ಮತ್ತೇ  ಸಹಜ ಸ್ಥಿತಿಗೆ ಬರಲು ಇನ್ನೆಷ್ಟು ದಿನಗಳು ಕಾಯಬೇಕೋ ಗೊತ್ತಿಲ್ಲಾ...